ಮಹಾಜನ ಕಾಲೇಜಿನಲ್ಲಿ ಅಪೂರ್ವ ನೋಟು, ನಾಣ್ಯಗಳ ಪ್ರದರ್ಶನ
ಮೈಸೂರು

ಮಹಾಜನ ಕಾಲೇಜಿನಲ್ಲಿ ಅಪೂರ್ವ ನೋಟು, ನಾಣ್ಯಗಳ ಪ್ರದರ್ಶನ

January 25, 2020

ಮೈಸೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಜಯ ಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಅಪರೂಪದ ನೋಟು ಮತ್ತು ನಾಣ್ಯಗಳ ಪ್ರದರ್ಶನ ಆಯೋಜಿಸಲಾಗಿದೆ. ಕೊಟಕ್ ಮಹೀಂದ್ರ ಬ್ಯಾಂಕ್‍ನ ನಿವೃತ್ತ ಹಿರಿಯ ವ್ಯವಸ್ಥಾಪಕ ಎಂ.ಎನ್. ಮುರಳೀಕೃಷ್ಣ ಅವರು ಈ ಪ್ರದರ್ಶನವನ್ನು ನಡೆಸಿಕೊಡುತ್ತಿದ್ದಾರೆ. ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಉಚಿತ ಪ್ರವೇಶದೊಂದಿಗೆ ಆಯೋ ಜಿಸಲಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಉದ್ಘಾಟನೆ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ವೆಂಕಟರಾಮು ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಧರ ಮತ್ತಿತರರು ಹಾಜರಿದ್ದರು.

200-300 ವರ್ಷಗಳ ಇತಿಹಾಸವುಳ್ಳ ವಿವಿಧ ಆಕಾರ ಹಾಗೂ ತೂಕದ ನಾಣ್ಯ ಗಳನ್ನು ನೋಡುವ ಅಪರೂಪದ ಅವಕಾಶ ಇದಾಗಿದ್ದು, ಪ್ರದರ್ಶನದಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಬಳಸುತ್ತಿದ್ದ ರಾಣಿ ವಿಕ್ಟೋರಿಯಾ, 7ನೇ ಎಡ್ವರ್ಡ್, ಕಿಂಗ್ ಜಾರ್ಜ್ ಮುಂತಾದವರ ಚಿತ್ರ ಮುದ್ರಿತ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ನೋಡಬಹುದಾಗಿದೆ. ಇದರ ಜೊತೆಗೆ ಮೈಸೂರು ಸಂಸ್ಥಾನದ ರಾಜ-ಮಹಾರಾಜರುಗಳು ಬಳಸುತ್ತಿದ್ದ ನಾಣ್ಯಗಳನ್ನು ಕೂಡ ಪ್ರದರ್ಶಿಸಲಾಗುತ್ತಿದೆ. ಇದಲ್ಲದೆ, ವಿಶೇಷ ಎನ್ನಿಸುವ ವಿದೇಶಿ ನೋಟುಗಳನ್ನು ಕಾಣಬಹುದು. 1 ಲಕ್ಷ ಮೌಲ್ಯದ ಗಣೇಶನ ಚಿತ್ರವಿರುವ ಮಲೇಷ್ಯಾ ದೇಶದ ನೋಟು, ವಿಯೆಟ್ನಾಂ, ಜಿಂಬಾಬ್ವೆ, ಯುಗೋಸ್ಲಾವಿಯ, ಟರ್ಕಿ ದೇಶಗಳ ನೋಟುಗಳನ್ನು ಪ್ರದರ್ಶಿಸಲಾಗಿದೆ.

Translate »