ನವದೆಹಲಿ: ಕೇಂದ್ರ ಸರ್ಕಾರ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಭೂಪೇನ್ ಹಜಾರಿಕಾ ಹಾಗೂ ಸಮಾಜ ಸೇವಕ ನಾನಾಜಿ ದೇಶಮುಖ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ `ಭಾರತ ರತ್ನ’ ನೀಡಿ ಗೌರವಿಸಿದೆ.
70ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ಸೇರಿದಂತೆ ಮೂವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ್ದು, ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡಿದ್ದ ನಾನಾಜಿ ದೇಶಮುಖ್ ಹಾಗೂ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ. ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಿದ್ಧಗಂಗಾ ಶ್ರೀಗಳಿಗೆ ಸಿಗಲಿಲ್ಲ ಭಾರತ ರತ್ನ: ಇತ್ತೀಚೆಗಷ್ಟೇ ಶಿವೈಕ್ಯರಾದ ತುಮಕೂರು ಸಿದ್ಧ ಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಲೇಬೇಕೆಂದು ಕರ್ನಾಟಕದಾದ್ಯಂತ ಭಾರೀ ಆಗ್ರಹಗಳು ಕೇಳಿಬಂದಿದ್ದವು. ಆದರೆ ಇದೀಗ ಕರ್ನಾಟಕದ ಕೋಟ್ಯಾಂತರ ಮಂದಿಯ ನಿರೀಕ್ಷೆ ಹುಸಿಯಾಗಿದೆ.
ಪ್ರಣಬ್ ಮುಖರ್ಜಿ: ಡಿಸೆಂಬರ್ 11, 1935ರಲ್ಲಿ ಪಶ್ಚಿಮ ಬಂಗಾಲ ದಲ್ಲಿ ಜನಿಸಿದರು. ಇವರು ಭಾರತದ ವಿತ್ತ ಮಂತ್ರಿಯಾಗಿದ್ದರು. ಲೋಕಸಭೆಯ ನಾಯಕ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಭಾರತದ ರಾಷ್ಟ್ರಪತಿ ಕೂಡ ಆಗಿದ್ದರು. ಇವರು ಕಲ್ಕತ್ತಾ ವಿಶ್ವವಿದ್ಯಾಲಯ ದಿಂದ ನ್ಯಾಯಶಾಸನದಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದಿದ್ದಾರೆ. ವಕೀಲ ಹಾಗೂ ಕಾಲೇಜಿನ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದು, ಡಿ.ಲಿಟ್. ಕೂಡ ಹೊಂದಿದ್ದಾರೆ.
ಇವರ ಸಂಸತ್ತಿನ ವೃತ್ತಿ ಜೀವನ ಐದು ದಶಕದ್ದು. ಕಾಂಗ್ರೆಸ್ ಪಕ್ಷದಿಂದ 1969ರಲ್ಲಿ ರಾಜ್ಯಸಭಾ ಸದಸ್ಯ ರಾಗಿ ಆಯ್ಕೆಗೊಂಡರು; ನಂತರ 1975, 1981, 1993 ಹಾಗೂ 1999 ಪುನರಾಯ್ಕೆಗೊಂಡರು. 1982ರಿಂದ 1984ರವರೆಗೆ ಭಾರತದ ವಿತ್ತ ಮಂತ್ರಿಯಾಗಿದ್ದರು. ಕೇಂದ್ರದಲ್ಲಿ ರಕ್ಷಣಾ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗೂ ಉದ್ದಿಮೆ ಸಚಿವರಾಗಿದ್ದರು. ಇವರಿಗೆ 2007ರಲ್ಲಿ ಪದ್ಮ ವಿಭೂಷಣ ಪುರಸ್ಕಾರವನ್ನು ನೀಡಲಾಗಿತ್ತು.
ನಾನಾಜಿ ದೇಶಮುಖ್: ನಾನಾಜಿ ದೇಶಮುಖ್ (11 ಅಕ್ಟೋ ಬರ್ 1916-27 ಫೆಬ್ರವರಿ 2010) ಭಾರತದ ಸಾಮಾಜಿಕ ಕಾರ್ಯ ಕರ್ತ. ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಇವರಿಗೆ ಪದ್ಮ ವಿಭೂಷಣ ಲಭಿಸಿದೆ. ಇವರು ಭಾರತೀಯ ಜನ ಸಂಘದ ನಾಯಕರಾಗಿದ್ದರಲ್ಲದೇ, ರಾಜ್ಯಸಭೆಯ ಸದಸ್ಯರಾಗಿದ್ದರು. ನಾನಾಜಿ ಅವರು ಅಕ್ಟೋಬರ್ 11, 1916ರಂದು ಪಧನಿ ಜಿಲ್ಲೆಯ ಸಣ್ಣ ಪಟ್ಟಣ ವಾದ ಕಡೋಲಿಯಲ್ಲಿ ಮರಾಠಿ-ಸ್ಪೀಕಿಂಗ್ ಕುಟುಂಬದಲ್ಲಿ ಜನಿಸಿದರು. ಹಣದ ಕೊರತೆಯ ಹೊರತಾಗಿಯೂ ಅವರು ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಈ ಕಾರಣದಿಂದ, ಅವರು ತಮ್ಮ ಶಿಕ್ಷಣಕ್ಕಾಗಿ ಹಣವನ್ನು ಸಂಗ್ರಹಿಸಲು ತರಕಾರಿ ಮಾರಾಟಗಾರರಾಗಿ ಕೆಲಸ ಮಾಡಿದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ದಲ್ಲೂ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದಲ್ಲಿ ಜನಿಸಿದರೂ, ಅವರ ಚಟುವಟಿಕೆಗಳ ಕ್ಷೇತ್ರಗಳು ರಾಜಸ್ಥಾನ ಮತ್ತು ಉತ್ತರಪ್ರದೇಶವಾಗಿತ್ತು.
ಭೂಪೆನ್ ಹಜಾರಿಕಾ: ಭೂಪೇನ್ ಹಜಾರಿಕಾ (8 ಸೆಪ್ಟೆಂಬರ್ 1926 – 5 ನವೆಂಬರ್ 2011). ಅಸ್ಸಾಂನ ಭಾರತೀಯ ಹಿನ್ನೆಲೆ ಗಾಯಕ, ಗೀತಕಾರ, ಸಂಗೀತ ಗಾರ, ಗಾಯಕ, ಕವಿ ಮತ್ತು ಚಲನಚಿತ್ರ ತಯಾರಕರಾಗಿ ದ್ದರು. ಮುಖ್ಯವಾಗಿ ಅಸ್ಸಾಮಿ ಭಾಷೆಯಲ್ಲಿ ಬರೆದ ಮತ್ತು ಹಾಡಲಾದ ಅವನ ಹಾಡುಗಳು ಮಾನವೀಯತೆ ಮತ್ತು ಸಾರ್ವತ್ರಿಕ ಸಹೋದರತ್ವದಿಂದ ಗುರುತಿಸಲ್ಪಟ್ಟವು ಮತ್ತು ಅವುಗಳನ್ನು ಹಲವು ಭಾಷೆಗಳಲ್ಲಿ ಭಾಷಾಂತರಿ ಸಲಾಗಿದ್ದು, ಅವುಗಳಲ್ಲಿ ಪ್ರಮುಖವಾಗಿ ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿವೆ. ಸಾಮುದಾಯಿಕ ಉತ್ಸಾಹ, ಸಾರ್ವತ್ರಿಕ ನ್ಯಾಯ ಮತ್ತು ಅನುಭೂತಿ ವಿಷಯಗಳ ಆಧಾರದ ಮೇಲೆ ಅವರ ಹಾಡುಗಳು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಜೊತೆಗೆ, ಅಸ್ಸಾಂನ ಜನರಲ್ಲಿ ಜನಪ್ರಿಯವಾಗಿವೆ. ಅವರು 1975ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1987), ಪದ್ಮಶ್ರೀ (1977), ಮತ್ತು ಪದ್ಮಭೂಷಣ (2001), ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1992), ಭಾರತ ಸರ್ಕಾರ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ (2008), ಸಂಗೀತ ನಾಟಕ, ನೃತ್ಯ ಮತ್ತು ನಾಟಕದ ರಾಷ್ಟ್ರೀಯ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿ, ಸಿನಿಮಾದಲ್ಲಿ ಅತ್ಯುನ್ನತ ಪ್ರಶಸ್ತಿ. ಅವರು 2012ರಲ್ಲಿ ಭಾರತದಲ್ಲಿ ಎರಡನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು. ಇದೀಗ ಮರಣಾನಂತರ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ `ಭಾರತ ರತ್ನ’ ನೀಡಲಾಗಿದೆ.