ಚಾಮರಾಜನಗರ: ರೆಸಾರ್ಟ್‍ನಲ್ಲಿ ಕಾಂಗ್ರೆಸ್ ಶಾಸಕರು ಬಡಿದಾಡಿ ಕೊಂಡಿರುವುದಕ್ಕೆ ಬಿಜೆಪಿ ಕಾರಣವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ದೂರಿದರು.
ಜಿಲ್ಲೆಯಲ್ಲಿ ಶುಕ್ರವಾರ ಸಚಿವ ಸಂಪುಟ ಉಪಸಮಿತಿಯು ಕೈಗೊಂಡಿರುವ ಬರ ಅಧ್ಯಯನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಿದ್ದು ಯಾರು? ಏಕೆ ಕರೆದುಕೊಂಡು ಹೋದರು? ಯಾವ ವಿಷಯಕ್ಕೆ ಹೊಡೆದಾಟ ನಡೆದಿದೆ? ಎಂದು ಪ್ರಶ್ನಿಸಿದ ಅವರು, ಇದೆಲ್ಲ ನಡೆಯಲು ಬಿಜೆಪಿಯೇ ಕಾರಣ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಹಾಗೂ ರಾಜ್ಯದ ನಾಯಕರು ಆಪರೇಷನ್ ಕಮಲ ನಡೆಸಲು ಮುಂದಾಗಿದ್ದರು. ಇತರೆ ಪಕ್ಷದ ಶಾಸಕರೊಂದಿಗೆ ಮಾತನಾಡಿ ಸರ್ಕಾರವನ್ನು ಅಭದ್ರಗೊಳಿಸುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದ್ದಾರೆ. ಇದನ್ನೆಲ್ಲ ರಾಜ್ಯದ ಜನ ಗಮನಿಸುತ್ತಿದ್ದು, ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಸರ್ಕಾರಕ್ಕೆ ಕನಿಷ್ಠ ಒಂದು ವರ್ಷವಾದರೂ ಅವ ಕಾಶ ನೀಡಿ ಆಡಳಿತವನ್ನು ನೋಡಿಕೊಳ್ಳಬೇಕಲ್ಲವೇ? ಅದನ್ನು ಬಿಟ್ಟು ಪ್ರತಿ ದಿನ, ಪ್ರತಿ ತಿಂಗಳು ಬೇರೆ ಪಕ್ಷದ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.