112 ಸಾಧಕರಿಗೆ ಪದ್ಮ ಪುರಸ್ಕಾರ
ಮೈಸೂರು

112 ಸಾಧಕರಿಗೆ ಪದ್ಮ ಪುರಸ್ಕಾರ

January 26, 2019

ನವದೆಹಲಿ: ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪುರಸ್ಕಾರ ಪಟ್ಟಿ ಶುಕ್ರವಾರ ರಾತ್ರಿ ಘೋಷಣೆಯಾಗಿದ್ದು, ಕರ್ನಾಟಕದ ಐವರು ಸೇರಿದಂತೆ ಒಟ್ಟು 112 ಸಾಧಕರು ಪ್ರತಿಷ್ಠಿತ ನಾಗರಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ನಾಲ್ವರಿಗೆ ಪದ್ಮವಿಭೂಷಣ, 14 ಸಾಧಕರಿಗೆ ಪದ್ಮಭೂಷಣ, 94 ಗಣ್ಯರಿಗೆ ಪದ್ಮಶ್ರೀ ಪುರಸ್ಕಾರ ಘೋಷಣೆಯಾಗಿದೆ.

ಕರ್ನಾಟಕದ ಸಾಧಕರು: ಪರಿಸರ ಪ್ರೀತಿಯ ಸಾಲು ಮರದ ತಿಮ್ಮಕ್ಕ, ಖ್ಯಾತ ಸರೋದ್ ವಾದಕರೂ ಆದ ಮೈಸೂರಿನ ರಾಜೀವ್ ತಾರಾನಾಥ್, ತಿ.ನರಸೀಪುರ ತಾಲೂಕಿನ ಮೂಗೂರು ಮೂಲದ ಚಿತ್ರ ನಿರ್ದೇಶಕ, ನಟ, ನಿರ್ದೇಶಕ, ನೃತ್ಯ ಪಟು ಪ್ರಭುದೇವ್, ಪುರಾತತ್ವ ಶಾಸ್ತ್ರಜ್ಞರಾದ ಶಾರದಾ ಶ್ರೀನಿವಾಸನ್ ಮತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ರೋಹಿಣಿ ಗೋಡಬೋಲೆ ಅವರು ಪ್ರದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯಕ್ಕೆ ಈ ಬಾರಿ ಪದ್ಮವಿಭೂಷಣ, ಪದ್ಮಭೂಷಣ ವಿಭಾಗದಲ್ಲಿ ಯಾವುದೇ ಪ್ರಶಸ್ತಿ ಬಂದಿಲ್ಲ.

4 ಪದ್ಮವಿಭೂಷಣ: ಜಾನಪದ ಕಲಾವಿದೆ ಛತ್ತೀಸ್‍ಗಢದ ತಿಜನ್ ಬಾಯಿ, ಸಾರ್ವಜನಿಕ ವ್ಯವಹಾರ ಕ್ಷೇತ್ರದ ವಿದೇಶಿ ಪ್ರಜೆಯಾದ ಇಸ್ಮಾಯಿಲ್ ಓಮರ್, ಮಹಾರಾಷ್ಟ್ರದ ವಾಣಿಜ್ಯೋದ್ಯಮಿ ಅನಿಲ್ ಕುಮಾರ್ ಮನಿಭಾಯ್ ನಾಯ್ಕ್ ಹಾಗೂ ಮಹಾರಾಷ್ಟ್ರದ ಕಲೆ-ರಂಗಭೂಮಿ ಕ್ಷೇತ್ರದ ಬಲವಂತ್ ಮೋರೆಶ್ವರ್ ಪುರಂದರೆ ಪದ್ಮವಿಭೂಷಣಕ್ಕೆ ಪಾತ್ರರಾಗಿದ್ದಾರೆ.

14 ಪದ್ಮಭೂಷಣ: ಇಸ್ರೋ ವಿಜ್ಞಾನಿ ಕೇರಳದ ನಂಬಿ ನಾರಾಯಣನ್, ಲೋಕಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ, ಕೇರಳದ ಬಹುಭಾಷಾ ನಟ ಮೋಹನ ಲಾಲ್, ಪತ್ರಕರ್ತ-ಖ್ಯಾತ ಅಂಕಣಕಾರರಾದ ದೆಹಲಿಯ ಕುಲ್‍ದೀಪ್ ನಯ್ಯರ್, ಮಾಜಿ ಸಂಸದ ಹುಕ್ಕಂದೇವ್ ನಾರಾಯಣ್ ಯಾದವ್ ಸೇರಿದಂತೆ 14 ಗಣ್ಯರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

94 ಪದ್ಮಶ್ರೀ: ಬಾಲಿವುಡ್ ನಟ-ಚಿತ್ರ ಸಾಹಿತಿ ಖಾದರ್ ಖಾನ್(ಮರಣೋತ್ತರ), ಬಹುಭಾಷಾ ನಟ ಮಹಾರಾಷ್ಟ್ರದ ಮನೋಜ್ ಬಾಜಪೇಯ್, ಫುಟ್ಬಾಲ್ ಆಟಗಾರ ಈಶಾನ್ಯ ರಾಜ್ಯದ ಸುನೀಲ್ ಚೆಟ್ರಿ, ಖ್ಯಾತ ಕ್ರಿಕೆಟರ್ ಗೌತಮ್ ಗಂಭೀರ್, ಖ್ಯಾತ ಗಾಯಕ ಶಂಕರ್ ಮಹದೇವನ್, ಕುಸ್ತಿಪಟು ಭಜರಂಗಿ, ಕಲೆ-ಸಂಗೀತ ಕ್ಷೇತ್ರದ ಸ್ವಪನ್ ಚೌಧರಿ, ನಾಗರಿಕ ಸೇವೆಗಳ ಎಸ್.ಜೈಶಂಕರ್, ಸಾಹಿತ್ಯ-ಶಿಕ್ಷಣ ಕ್ಷೇತ್ರದ (ಅಮೆರಿಕ ವಾಸಿ) ಗೀತಾ ಮೆಹ್ತಾ, ಉದ್ಯಮ-ತಂತ್ರಜ್ಞಾನ ಕ್ಷೇತ್ರದ (ಅಮೆರಿಕ ವಾಸಿ) ಶಂತನು ನಾರಾಯಣ್, ಕಬಡ್ಡಿ ಆಟಗಾರ ಅಜಯ್ ಠಾಕೂರ್ ಸೇರಿದಂತೆ 94 ಸಾಧಕರು ಪದ್ಮಶ್ರೀಗೆ ಪಾತ್ರರಾಗಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

21 ಮಹಿಳೆಯರಿಗೆ ಗೌರವ: ಈ ಬಾರಿಯ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ 21 ಮಹಿಳೆಯರಿದ್ದಾರೆ. ಒಟ್ಟು 112 ಮಂದಿ ಪುರಸ್ಕøತರಲ್ಲಿ 11 ಮಂದಿ ವಿದೇಶಿಯರಿದ್ದು, ಓರ್ವ ತೃತೀಯ ಲಿಂಗಿ ಕೂಡಾ ಇದ್ದಾರೆ.

Translate »