ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ: ಆರೋಪಿ ನಳಿನಿಗೆ ಜಾಮೀನು
ಮೈಸೂರು

ಫ್ರೀ ಕಾಶ್ಮೀರ ಫಲಕ ಪ್ರದರ್ಶನ ಪ್ರಕರಣ: ಆರೋಪಿ ನಳಿನಿಗೆ ಜಾಮೀನು

January 28, 2020

ಮೈಸೂರು: ಪ್ರತಿಭಟನೆಯಲ್ಲಿ `ಫ್ರೀ ಕಾಶ್ಮೀರ’ ಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಳಿನಿ ಬಾಲಕುಮಾರ್‍ಗೆ ಮೈಸೂರಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು.

ಆರೋಪಿಗಳು ಜಾಮೀನು ಕೋರಿ ಜ.20ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಜ.24ರಂದು ವಾದ-ಪ್ರತಿವಾದ ನಡೆದಿತ್ತಾದರೂ ಆದೇಶವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಸೋಮವಾರ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು, 50 ಸಾವಿರ ರೂ. ಬಾಂಡ್, ಒಬ್ಬರ ಶ್ಯೂರಿಟಿ ನೀಡಬೇಕು. 15 ದಿನಗಳಿಗೊಮ್ಮ್ಮೆ ಸಂಬಂಧಪಟ್ಟ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಿ, ಸಹಿ ಹಾಕಬೇಕು ಹಾಗೂ ತನಿಖೆಗೆ ಸಹಕರಿಸಬೇಕು. ಪ್ರಕರಣ ಸಂಬಂಧ ಸಾಕ್ಷಿ ನಾಶ ಪಡಿಸಬಾರದು. ಜಾಮೀನು ಅವಧಿಯಲ್ಲಿ ಮತ್ತೆ ಈ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಬೇಕು. ವಾಸಸ್ಥಳ ದೃಢೀಕರಣ ಪತ್ರ ನೀಡಬೇಕು. ಪಾಸ್‍ಪೋರ್ಟ್ ಇದ್ದರೆ ಅದನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕೆಂಬ ಷರತ್ತುಗಳನ್ನು ವಿಧಿಸಿ, 12 ಪುಟದ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಇದೇ ಪ್ರಕರಣದಲ್ಲಿ ಮರಿದೇವಯ್ಯ ಅವರಿಗೂ ಜಾಮೀನು ದೊರೆತಿದೆ ಎಂದು ನಳಿನಿ ಪರ ವಕೀಲರು ಮಾಧ್ಯಮಗಳಿಗೆ ತಿಳಿಸಿದರು.

ನವದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಖಂಡಿಸಿ ಜ.8ರಂದು ಮೈಸೂರು ವಿವಿಯ ಮಾನಸಗಂಗೋತ್ರಿ ಆವರಣದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಯುವತಿ, `ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ್ದು ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಮರಿದೇವಯ್ಯ ಹಾಗೂ ಫಲಕ ಪ್ರದರ್ಶಿಸಿದ ನಳಿನಿ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಾದ ಕಾರಣ ಆರೋಪಿಗಳ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿತು. ಆದರೆ ಜಗದೀಶ್ ನೇತೃತ್ವದ 5 ಮಂದಿ ವಕೀಲರು ವಕಾಲತು ವಹಿಸಿದ್ದಾರೆ. ನ್ಯಾಯಾಲಯ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಕ್ಷ್ಮೀಪುರಂ ಠಾಣೆ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದರು. ಕೋರ್ಟ್ ಆವರಣದಲ್ಲಿ ಪ್ರಗತಿಪರರು, ದಲಿತ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಜಾಮೀನು ಆದೇಶ ಹೊರಬಿದ್ದ ಕೂಡಲೇ ನ್ಯಾಯಾಲಯ ಆವರಣದಿಂದ ಹೊರಬಂದು ಸಂತಸ ವ್ಯಕ್ತಪಡಿಸಿದರು.

Translate »