ಹೆಣ್ಣು ತೋರಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಚಿನ್ನಾಭರಣ ಸುಲಿಗೆ  ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ
ಮೈಸೂರು

ಹೆಣ್ಣು ತೋರಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಚಿನ್ನಾಭರಣ ಸುಲಿಗೆ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ

January 31, 2020

ಮೈಸೂರು: ಮಗನಿಗೆ ಹೆಣ್ಣು ತೋರಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಮಾರ್ಗಮಧ್ಯೆ ಚಾಕು ತೋರಿಸಿ ಆಕೆಯಿಂದ 45 ಗ್ರಾಂ ಚಿನ್ನದ ಆಭರಣ ಹಾಗೂ 600 ರೂ. ನಗದು ಸುಲಿಗೆ ಮಾಡಿದ್ದ ಖತರ್ನಾಕ್ ಖದೀಮನಿಗೆ ಮೈಸೂರು ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ (ಜ.30) ತೀರ್ಪು ನೀಡಿದೆ.

ಮೈಸೂರು ತಾಲೂಕು ತುಮ್ಮನೇರಳೆ ಗ್ರಾಮದ ನಾಗೆಂದ್ರ ಜೈಲು ಶಿಕ್ಷೆಗೊಳಗಾದ ಸುಲಿಗೆಕೋರ. 2014ರ ಮೇ 23ರಂದು ಸಂಜೆ 5.15 ಗಂಟೆ ವೇಳೆಗೆ ಮೈಸೂರಿನ ದಟ್ಟಗಳ್ಳಿ ನಿವಾಸಿ ಮಲ್ಲಾಜಮ್ಮ ಎಂಬುವರನ್ನು ಆಕೆಯ ಮಗನಿಗೆ ತನಗೆ ಗೊತ್ತಿರುವ ಮನೆಯಲ್ಲಿ ಹೆಣ್ಣು ತೋರಿಸುವುದಾಗಿ ಹೇಳಿ ತನ್ನ ಹೀರೋ ಹೋಂಡಾ ಪ್ಯಾಷನ್ ಪ್ರೋ(ಕೆಎ09ಇಯು9785) ಬೈಕಿನಲ್ಲಿ ಕೂರಿಸಿಕೊಂಡು, ಹೋಗಿದ್ದ.

ವರುಣಾ ಗ್ರಾಮದ ಕಡೆಯಿಂದ ಸುತ್ತೂರು ಕಡೆಗೆ ಹೋಗುವ ರಸ್ತೆಯಲ್ಲಿ ಕರೆದೊಯ್ದ ನಾಗೇಂದ್ರ, ಸಂಜೆ 6.45 ಗಂಟೆ ವೇಳೆಗೆ ಮೋಸಂಬಾಯನಹಳ್ಳಿ ಗ್ರಾಮದ ಬಳಿ ಮರಿಕೆಂಚಪ್ಪ ಎಂಬುವ ರಿಗೆ ಸೇರಿದ ಜಮೀನಿನ ಹತ್ತಿರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ, ಚಾಕು ತೋರಿಸಿ ಬೆದರಿಸಿ ಮಲ್ಲಾಜಮ್ಮ ಮೈಮೇಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಕಿವಿಯಲ್ಲಿದ್ದ 5ಗ್ರಾಂ ಚಿನ್ನದ ಓಲೆ ಹಾಗೂ ಪರ್ಸ್‍ನಲ್ಲಿದ್ದ 600 ರೂ.ನಗದನ್ನು ಸುಲಿಗೆ ಮಾಡಿ, ಆಕೆಯನ್ನು ಕತ್ತಲಲ್ಲಿ ಅಲ್ಲೇ ಬಿಟ್ಟು ಬೈಕ್‍ನಲ್ಲಿ ಪರಾರಿಯಾಗಿದ್ದ.

ಇದರಿಂದ ಗಾಬರಿಗೊಂಡ ಆಕೆ, ಹೇಗೋ ಮೈಸೂರಿಗೆ ಬಂದು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಘಟನೆಯನ್ನು ವಿವರಿಸಿ, ದೂರು ನೀಡಿದ್ದರ ಮೇರೆಗೆ ಆರೋಪಿ ನಾಗೇಂದ್ರನನ್ನು ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 392 ಮತ್ತು 397 ರೀತ್ಯಾ ಪ್ರಕರಣ ದಾಖ ಲಾಗಿತ್ತು. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಅಂದಿನ ಸರ್ಕಲ್ ಇನ್‍ಸ್ಪೆಕ್ಟರ್ ಗೋಪಾಲಕೃಷ್ಣ ತನಿಖೆ ನಡೆಸಿ, ನ್ಯಾಯಾ ಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಭಾರತ್‍ಕುಮಾರ್ ಅವರು, ವಾದ-ಪ್ರತಿವಾದಗಳನ್ನು ಆಲಿಸಿದ ನಂತರ ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆ ಯಲ್ಲಿ ಅಪರಾಧಿ ನಾಗೇಂದ್ರ(34)ನಿಗೆ ಐಪಿಸಿ ಸೆಕ್ಷನ್ 392ರಡಿ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ಮತ್ತು ಕಲಂ 397ರಡಿ ಅಪರಾಧಕ್ಕೆ 7 ವರ್ಷ ಜೈಲು ವಾಸ ಹಾಗೂ ಐದು ಸಾವಿರ ರೂ. ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ವಾಸಂತಿ ಎಂ.ಅಂಗಡಿ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಅಂದಿನ ಮೈಸೂರು ಗ್ರಾಮಾಂತರ ಉಪವಿಭಾಗದ ಡಿವೈಎಸ್‍ಪಿ ವಿಕ್ರಂ ಅಮಟೆ ಸಹ ತನಿಖೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

25 ಪ್ರಕರಣಗಳಲ್ಲಿ ಭಾಗಿ: ಮಹಿಳೆ ಸುಲಿಗೆ ಪ್ರಕರಣಕ್ಕೂ ಮೊದಲು ನಂಜನಗೂಡು ಬಳಿಯ ಟಿವಿಎಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಯಾಗಿದ್ದ ನಾಗೇಂದ್ರ 2010ರಲ್ಲಿ ತನ್ನ ತಂದೆ ಜೊತೆ ಸೇರಿ ರಾತ್ರಿ ವೇಳೆ ಕಾರ್ಖಾನೆಯ ಕೊಠಡಿ ಬೀಗ ಒಡೆದು 19.05 ಲಕ್ಷ ರೂ. ಹಣ ಕಳವು ಮಾಡಿದ್ದ. ಸದರಿ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ತದನಂತರ ಆತ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕೊಲೆ ಪ್ರಕರಣ, ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ ಯತ್ನ ಪ್ರಕರಣ, ಮೈಸೂ ರಿನ ದೇವರಾಜ ಮತ್ತು ನಜರ್‍ಬಾದ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಸೇರಿ ಮೈಸೂರು ಜಿಲ್ಲೆಯಲ್ಲಿ ಒಟ್ಟು 25 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈಗ ಜೈಲು ಸೇರಿದ್ದಾನೆ.

Translate »