ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ
ಮೈಸೂರು

ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ

August 2, 2018

ಮೈಸೂರು: ಮೈಸೂರು ನಗರದಲ್ಲಿ ನಾಲ್ಕು ದಿನಗಳ ಕಾಲ `ಕಾನೂನು ಸಾಕ್ಷರತಾ ರಥ’ ಸಂಚರಿಸಲಿದ್ದು, ಆ ಮೂಲಕ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಿದೆ.

ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಪ್ರಧಾನ ನ್ಯಾಯಾದೀಶರೂ ಆದ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೋಡಿ ಬುಧವಾರ ಚಾಲನೆ ನೀಡಿದರು.

ಕಾನೂನು ಅರಿವಿನಿಂದ ನಾಗರಿಕ ಸಮಾಜ: ರಥದ ಸಂಚಾರಕ್ಕೆ ಹಸಿರು ನಿಶಾನೆ ತೋರಿದÀ ಎಸ್.ಕೆ.ವಂಟಿಗೋಡಿ ಮಾತನಾಡಿ, ವ್ಯಕ್ತಿಯೊಬ್ಬ ಉತ್ತಮ ನಾಗರಿಕನಾಗಬೇಕಾದರೆ ಕಾನೂನು ತಿಳುವಳಿಕೆ ಅಗತ್ಯವಾಗಿ ಬೇಕಾಗುತ್ತದೆ. ಅದೇ ರೀತಿ ಕಾನೂನು ತಿಳುವಳಿಕೆ ಪ್ರಮಾಣ ಹೆಚ್ಚಾದರೆ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಸದರಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವ ಮೂಲಕ ಈ ರಥ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ಕಾನೂನು ಅರಿವು ಮೂಡಿಸಲು ಏರ್ಪಡಿಸಿರುವ ಕಾನೂನು ಸಾಕ್ಷರತಾ ರಥದ ಸಂಚಾರ ಕಾರ್ಯಕ್ರಮ ವಿಶಿಷ್ಟ ಹಾಗೂ ಮಹತ್ವದ ಕಾರ್ಯಕ್ರಮವಾಗಿದೆ. ಒಂದು ರೀತಿಯಲ್ಲಿ ಕಾನೂನು ಮಹತ್ವವನ್ನು ಜನಸಾಮಾನ್ಯರ ಬಳಿಗೇ ಕೊಂಡೊಯ್ಯುವುದು ಇದರಿಂದ ಸಾಧ್ಯವಾಗಲಿದೆ. ಕಾನೂನು ಸೇವೆಗಳ ಪ್ರಾಧಿಕಾರ ಈ ರೀತಿಯ ಉತ್ತಮ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ಕಾನೂನು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯ ಸಹಕಾರ ನೀಡಲು ಮೈಸೂರು ವಕೀಲರ ಸಂಘ ಸಿದ್ಧವಿದೆ ಎಂದು ಪ್ರಕಟಿಸಿದರು.

ಇದೇ ವೇಳೆ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ, ಇಂದಿನಿಂದ ನಾಲ್ಕು ದಿನಗಳು ಮೈಸೂರು ನಗರದ ವಿವಿಧ ಕಾಲೇಜುಗಳಿಗೆ ಕಾನೂನು ಸಾಕ್ಷರತಾ ರಥ ತೆರಳಲಿದೆ. ಈ ವೇಳೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಪೋಸ್ಕೋ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಕಾನೂನುಗಳ ಸಮಗ್ರ ನೋಟವನ್ನು ಸಂಕ್ಷಿಪ್ತವಾಗಿ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

ಅಗತ್ಯವಿದ್ದರೆ ಕಾನೂನು ನೆರವು: ಕಾನೂನಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ಲಭ್ಯವಾದರೆ ತಂತಾನೆ ಅವರ ಪೋಷಕರಲ್ಲಿ ಕಾನೂನು ಅರಿವು ಮೂಡುತ್ತದೆ. ಗ್ರಾಮೀಣ ಜನರಲ್ಲಿ ಕಾನೂನು ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.

ಕಾಲೇಜುಗಳ ಆವರಣದಲ್ಲಿ ಉಪನ್ಯಾಸ ಹಾಗೂ ಸಂವಾದದ ಮೂಲಕ ಕಾನೂನಿನ ಬಗ್ಗೆ ಮಾಹಿತಿ ನೀಡಲಾಗುವುದು. ಈ ವೇಳೆ ಅಗತ್ಯತೆ ಇದ್ದಲ್ಲಿ ಅಂತಹವರಿಗೆ ಉಚಿತ ಕಾನೂನು ನೆರವು ನೀಡಲು ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ ವಿವರಿಸಿದರು.

ಎಲ್ಲೆಲ್ಲಿ ಸಂಚಾರ: ಟೆಂಪೋದಲ್ಲಿ ತೆರಳಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ವಾಹನದಲ್ಲಿ ಅಗತ್ಯ ಧ್ವನಿವರ್ಧಕದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜಿರುಲ್ಲಾ ಅವರ ನೇತೃತ್ವದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ. ಇಂದು ಕುವೆಂಪುನಗರದ ಕುವೆಂಪು ಪದವಿ ಪೂರ್ವ ಕಾಲೇಜು, ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು, ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ್ದ ಕಾನೂನು ಸಾಕ್ಷರತಾ ರಥವು ಆ.2ರಂದು ಮಧ್ಯಾಹ್ನ 12ಕ್ಕೆ ಮಹಾರಾಣಿ ಪದವಿಪೂರ್ವ ಕಾಲೇಜು, ಮಧ್ಯಾಹ್ನ 3ಕ್ಕೆ ಶ್ರೀರಾಂಪುರದ ಮದರ್ ಥೆರೇಸಾ ಪದವಿಪೂರ್ವ ಕಾಲೇಜು, ಸಂಜೆ 6ಕ್ಕೆ ಯುವರಾಜ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಲಿದೆ.

ಅದೇ ರೀತಿ ಆ.3ರಂದು ಬೆಳಿಗ್ಗೆ 10ಕ್ಕೆ ಶಾರದಾವಿಲಾಸ ಪದವಿ ಕಾಲೇಜು, ಮಧ್ಯಾಹ್ನ 12ಕ್ಕೆ ಕೆಸರೆಯ ಸರ್ಕಾರಿ ಪದವಿಪೂರ್ವ ಕಾಲೇಜು, ಸಂಜೆ 6ಕ್ಕೆ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಪದವಿ ಪುರುಷರ ವಿದ್ಯಾರ್ಥಿನಿಲಯ, ಆ.4ರಂದು ಬೆಳಿಗ್ಗೆ 10ಕ್ಕೆ ವಿಜಯನಗರದ ಸ್ತ್ರೀಶಕ್ತಿ ಭವನ, ಮಧ್ಯಾಹ್ನ 12ಕ್ಕೆ ಲಕ್ಷ್ಮೀಪುರಂನ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸಂಜೆ 6ಕ್ಕೆ ಮಾನಸ ಗಂಗೋತ್ರಿಯ ಸ್ನಾತಕೋತ್ತರ ಪದವಿ ಮಹಿಳೆಯರ ವಿದ್ಯಾರ್ಥಿನಿಲಯಕ್ಕೆ ಕಾನೂನು ಸಾಕ್ಷರತಾ ರಥ ಭೇಟಿ ನೀಡಲಿದೆ. ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಪ್ರಾಧಿಕಾರದ ಸಿಬ್ಬಂದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೈಸೂರಿಗೆ 3 ಕೌಟುಂಬಿಕ ನ್ಯಾಯಾಲಯ ಮಂಜೂರು

ಮೈಸೂರು: ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದಿನಿಂದ ಎರಡನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಕಾರ್ಯಾರಂಭ ಮಾಡಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಮೈಸೂರು ನ್ಯಾಯಾಲಯಕ್ಕೆ ಮೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಕಾರ್ಯಚಟುವಟಿಕೆಯನ್ನು ಬುಧವಾರದಿಂದ ಆರಂಭಿಸಿತು. ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ, ಎರಡೂವರೆ ಸಾವಿರಕ್ಕೂ ಹೆಚ್ಚು ಕೌಟುಂಬಿಕ ಪ್ರಕರಣಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅವುಗಳ ವಿಲೇವಾರಿಗೆ ಉಚ್ಛ ನ್ಯಾಯಾಲಯ ಮೂರು ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಗಳನ್ನು ಮಂಜೂರು ಮಾಡಿದೆ. ಈ ಪೈಕಿ ಇಂದಿನಿಂದ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಆರಂಭಗೊಂಡಿದ್ದು, ನ್ಯಾಯಾಧೀಶರೊಂದಿಗೆ ಅಗತ್ಯ ಸಿಬ್ಬಂದಿಯೂ ನೇಮಕವಾಗಿದ್ದಾರೆ ಎಂದು ಮಾಹಿತಿ ನೀಡಿದರು.

Translate »