ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿಗೆ ಅಗ್ನಿ ಶಮನದ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ
ಮೈಸೂರು

ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿಗೆ ಅಗ್ನಿ ಶಮನದ ಬಗ್ಗೆ ವಿಶೇಷ ತರಬೇತಿ ಕಾರ್ಯಾಗಾರ

July 26, 2018

ಮೈಸೂರು: ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಿಬ್ಬಂದಿ ವರ್ಗದವರಿಗೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಿಂದ ಎರಡು ದಿನಗಳ ಅಗ್ನಿಶಾಮಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಅಗ್ನಿಶಾಮಕ ದಳದ ನುರಿತ ಅಧಿಕಾರಿಗಳು ಹೊತ್ತಿ ಉರಿಯುತ್ತಿರುವ ಕಟ್ಟಡಗಳಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಅನುಸರಿಸ ಬೇಕಾದ ತಂತ್ರಗಳು, ಬೆಂಕಿ ಆರಿಸುವಿಕೆ ಕುರಿತು ಪ್ರಾತ್ಯಕ್ಷಿತೆ ನೀಡಿದರು. ಹಾಗೆಯೇ ಅಗ್ನಿಶಾಮಕ ಸಿಬ್ಬಂದಿ ಅಗ್ನಿದಹನ ಸಿದ್ದಾಂತ, ಅಗ್ನಿಯ ವರ್ಗೀಕರಣ ಮತ್ತು ಬೆಂಕಿ ಆರಿಸುವ ವಿಧಾನಗಳನ್ನು ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಹಂಚಿಕೊಂಡರು.

ಈ ಸಂದರ್ಭ ಕೊಲಂಬಿಯಾ ಏಷಿಯಾ ಆಸ್ಪತ್ರೆ ಪ್ರಧಾನ ವ್ಯವಸ್ಥಾಪಕ ಕರ್ನಲ್ ರಾಹುಲ್ ತಿವಾರಿ ಮಾತನಾಡಿ, ವರ್ಷಕ್ಕೆ ಎರಡು ಬಾರಿ ಅಗ್ನಿಶಾಮಕ ಇಲಾಖೆಯಿಂದ ಬೆಂಕಿ ನಂದಿಸುವ ತರಬೇತಿಯನ್ನು ಸಿಬ್ಬಂದಿಗಳಿಗಾಗಿ ಆಯೋಜನೆ ಮಾಡುತ್ತೇವೆ. ಅಗ್ನಿಶಾಮಕ ತರಬೇತಿಗಳಿಂದ ಉದ್ಯೋಗಿಗಳಿಗೆ ಅಗ್ನಿಯಿಂದಾಗುವ ಅಪಾಯಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದರು.

ಸುರಕ್ಷತೆಯ ಮೌಲ್ಯಮಾಪನ ನಡೆಸಲು, ಕೆಲಸದ ಸ್ಥಳಗಳಲ್ಲಿ ಬೆಂಕಿಯಿಂದಾಗುವ ಅನಾಹುತವನ್ನು ತಪ್ಪಿಸಲು ಮತ್ತು ಬೆಂಕಿ ಅವಘಡಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ತರಬೇತಿ ಸಹಾಯ ಮಾಡುತ್ತದೆ. ಪ್ರತ್ಯಕ್ಷ ಅಗ್ನಿಶಾಮಕ ತರಬೇತಿಯು ನಮ್ಮ ಆಸ್ಪತ್ರೆಯಲ್ಲಿನ ಅಗ್ನಿ ಸುರಕ್ಷತಾ ಯೋಜನೆಗಳನ್ನು ಸುಧಾರಿಸಲು ಮತ್ತು ಅನಿರೀಕ್ಷಿತ ಅಪಾಯಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.

ನಂತರ ಮೈಸೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಜೆ.ಗಂಗಾನಾಯಕ್ ಮಾತನಾಡಿ, ಬಹುಮಹಡಿ ಕಟ್ಟಡಗಳು, ಕಾರ್ಖಾನೆಗಳು, ಹೊಗೆಸೊಪ್ಪಿನ ಬ್ಯಾರನ್‍ಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಗ್ನಿಶಾಮಕ ತರಬೇತಿ ಕಾರ್ಯಗಾರವನ್ನು ನಡೆಸುತ್ತೇವೆ. ಇದರಿಂದ ಬೆಂಕಿ ಅನಾಹುತಗಳ ಬಗ್ಗೆ ಅಲ್ಲಿನ ಸಿಬ್ಬಂದಿಗಳು ಅರಿವನ್ನು ಪಡೆಯುತ್ತಾರೆ. ಜೊತೆಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಸಿಬ್ಬಂದಿಗಳಿಗೂ ‘ಸೆಮಿ ಟ್ರೈನರ್’ ಎಂದು ಪ್ರಮಾಣ ಪತ್ರವನ್ನು ನೀಡುತ್ತೇವೆ ಎಂದರು.

ತರಬೇತಿಯಲ್ಲಿ ಯಾವ್ಯಾವ ಉಪಕರಣಗಳನ್ನು ಬಳಸಿ ಬೆಂಕಿಯನ್ನು ನಂದಿಸಬೇಕು. ಯಾವ ರೀತಿ ನಿಂತು ನೀರನ್ನು ಹಾಯಿಸಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಸಲಾಗುತ್ತದೆ. ನಂತರ ತರಬೇತಿ ಪಡೆದವರಿಂದ ಬೆಂಕಿ ಆರಿಸುವಿಕೆಯನ್ನು ಮಾಡಿಸಲಾಗುತ್ತದೆ.

ಶಾರ್ಟ್ ಬ್ರಾಂಚ್, ಲಾಂಗ್ ಬ್ರಾಂಚ್, ಲೊ ಫ್ರಜರ್ ಆಪ್ಲಿಕೆಟರ್, ರಿವಾಲ್‍ವಿಂಗ್ ಹೆಡ್, ಫೊ ಮೆಕಿಂಗ್ ಬ್ರಾಂಚ್ ಮತ್ತು ಕರ್‍ಟನ್ ಸ್ಪ್ರೇ ಉಪಕರಣಗಳು ಹಾಗೂ ಮಿಸ್ಟ್ ಟೆಕ್ನಾಲಜಿಯನ್ನು ಬಳಸಿ ಬೆಂಕಿ ಆರಿಸುವುದನ್ನು ಕಲಿಸಲಾಗುತ್ತದೆ. ಸಾಮಾನ್ಯವಾಗಿ ಹೊಗೆ ಸೊಪ್ಪು ಬ್ಯಾರನ್‍ಗಳಲ್ಲಿ ಬೆಂಕಿ ಹೊತ್ತಿದಾಗ ಹೊಗೆ ಹೆಚ್ಚಾಗಿ ಹರಡುವುದರಿಂದ ಅಲ್ಲಿ ರಿವಾಲ್‍ವಿಂಗ್ ಹೆಡ್‍ನ್ನು ಬಳಸುತ್ತೇವೆ. ಇದು ಬೆಂಕಿಯನ್ನು ನಂದಿಸುವುದರ ಜೊತೆಗೆ ಹೊಗೆಯನ್ನು ಹೊರಹಾಕುತ್ತದೆ ಎಂದು ವಿವರಿಸಿದರು.

ನ್ಯಾಷನಲ್ ಬಿಲ್ಡಿಂಗ್ ಕೋಡ್-2005 ಮತ್ತು ಪರಿಸ್ಕøತ 2016ರ ಪ್ರಕಾರ ಕಾರ್ಖಾನೆಗಳಲ್ಲಿ ಅಥವಾ ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಲ್ಲಿ ಶೇ.40 ರಷ್ಟು ಮಂದಿ ಬೆಂಕಿ ನಂದಿಸುವುದನ್ನು ಕಲಿಯಬೇಕು. ಆದ್ದರಿಂದ ತರಬೇತಿಯನ್ನು ನೀಡುತ್ತಿದ್ದೇವೆ ಎಂದರು.

ಚಾಮರಾಜನಗರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ನವೀನ್ ಕುಮಾರ್, ಅಭಿಷೇಕ್ ತಾಮಸ್, ಡಾ. ಉಪೇಂದ್ರ ಶೆಣೈ ಮತ್ತು 50 ಕ್ಕೂ ಹೆಚ್ಚು ಆಸ್ಪತ್ರೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Translate »