ರಂಗಾಯಣದಿಂದ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ ಪ್ರದರ್ಶನ 10 ವರ್ಷಗಳ ನಂತರ ಮತ್ತೆ ಪ್ರಯೋಗ
ಮೈಸೂರು

ರಂಗಾಯಣದಿಂದ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ ಪ್ರದರ್ಶನ 10 ವರ್ಷಗಳ ನಂತರ ಮತ್ತೆ ಪ್ರಯೋಗ

July 26, 2018

ಮೈಸೂರು: ಮೈಸೂರಿನ ರಂಗಾಯಣ ಹೊಸ ಹೊಸ ರಂಗ ಪ್ರಯೋಗಗಳಿಗೆ ಹೆಸರುವಾಸಿ. ವಿಲಿಯಂ ಶೇಕ್ಸ್‍ಪಿಯರ್ ಸೇರಿದಂತೆ ಅನೇಕ ಅದ್ಭುತ ನಾಟಕಕಾರರನ್ನು ರಂಗಕ್ಕೆ ತಂದ ಹೆಗ್ಗಳಿಕೆ ರಂಗಾಯಣದ್ದು. ಇಂದು 10 ವರ್ಷಗಳ ನಂತರ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ವನ್ನು ಪ್ರದರ್ಶಿಸಲು ಸಜ್ಜಾಗಿದೆ.

`ಮನ್ಮಥ ವಿಜಯ’ ಎಂಬ ಪೂರ್ಣ ಪ್ರಮಾಣದ ಶಾಸ್ತ್ರಿಯ ಕಂಪನಿ ನಾಟಕವನ್ನು ಪ್ರದರ್ಶಿಸಲು ರಂಗಾಯಣದ ಕಲಾವಿದರು ಸಜ್ಜಾಗಿದ್ದಾರೆ. 10 ವರ್ಷಗಳ ಹಿಂದೆ ರಂಗಾಯಣದ ಅಂಗಳದಲ್ಲಿ ಮೂಡಿ ಬಂದು ಎಲ್ಲರ ಮೆಚ್ಚುಗೆಗಳಿಸಿರುವ `ಸದಾರಮೆ’ ನಾಟಕ ನಿರ್ದೇಶಕ ವೈ.ಎಂ.ಪುಟ್ಟಣ್ಣಯ್ಯರವರೇ ಈ ನಾಟಕವನ್ನು ನಿರ್ದೇಶನ, ಸಂಗೀತ ನೀಡುತ್ತಿರುವುದು ಮತ್ತೊಂದು ವಿಶೇಷ.

ಕಾಳಿದಾಸನ ಮಹಾಕಾವ್ಯಗಳಲ್ಲಿ ಪ್ರಸಿದ್ಧವಾದ `ಕುಮಾರ ಸಂಭವ’ವೇ `ಮನ್ಮಥ ವಿಜಯ’ ನಾಟಕ. ಇದನ್ನು ಕನ್ನಡದಲ್ಲಿ ನಾಟಕಕಾರ ಗಿರಿಭಟ್ಟರ ತಮ್ಮಯ್ಯ ರಚಿಸಿದ್ದಾರೆ. 7 ಗಂಟೆಗಳ ಕಾಲ ನಡೆಯುತ್ತಿದ್ದ ಈ ನಾಟಕವನ್ನು 3 ಗಂಟೆಗೆ ಸೀಮಿತಗೊಳಿಸಿದ್ದು, ಅದರಲ್ಲಿ 1 ಗಂಟೆ ಸಂಗೀತ, ಉಳಿದ 2 ಗಂಟೆ ಅಭಿನಯ-ಸಂಭಾಷಣೆ ಇರಲಿದೆ. ಮೂಲವನ್ನು ಬಿಡದೆ ಹೊಸದನ್ನು ಸೇರಿಸಿಕೊಂಡು ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ನಾಟಕವನ್ನು ರಂಗದ ಮೇಲೆ ತರಲಾಗುತ್ತಿದೆ.

ಇದು ಸಂಗೀತ ಪ್ರದಾನ ಶಾಸ್ತ್ರೀಯ ಪೌರಣಿಕ ನಾಟಕವಾಗಿದ್ದು, ಕಂದ, ಹಾಡುಗಳು ಸೇರಿ 28-30 ಶಾಸ್ತ್ರೀಯ ರಂಗ ಗೀತೆಗಳಿವೆ. ಕ್ರಮವಾಗಿ ನಾಟಕ ಕಂಪನಿಗೆ ಒಳಪಟ್ಟಂತೆ ಹಾರ್ಮೋನಿಯಂ, ತಬಲಾ, ಕ್ಲಾರಿಯೋನೆಟ್ ಸೇರಿದಂತೆ ಅನೇಕ ವಾದ್ಯ ಪರಿಕರಗಳನ್ನು ಬಳಸಲಾಗುತ್ತಿದೆ.

ರಂಗಾಯಣದ 16 ಮಂದಿ ಹಿರಿಯ ಹಾಗೂ 12 ಮಂದಿ ಕಿರಿಯ ಕಲಾವಿದರು ಅಭಿನಯಿಸುತ್ತಿದ್ದು, ಒಂದೂವರೆ ತಿಂಗಳಿನಿಂದ ರಂಗಾಯಣದ ಅಂಗಳದಲ್ಲಿ ತಾಲೀಮು ನಡೆಸುತ್ತಿದ್ದಾರೆ. ಇದರ ಪ್ರಯೋಗವು ಜು.29ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶಗೊಳ್ಳಲಿದ್ದು, ಪ್ರವೇಶ ದರ 50 ರೂ. ನಿಗದಿಪಡಿಸಲಾಗಿದೆ.

ಪಾತ್ರಧಾರಿಗಳು: ಮಹದೇವ(ಈಶ್ವರ ಪಾತ್ರ), ಪ್ರಮೀಳಾ ಬೆಂಗ್ರೆ (ಪಾರ್ವತಿ, ದಾಕ್ಷಾಯಿಣಿ), ಜಗದೀಶ್ ಮನವಾರ್ತೆ (ನಾರದ), ವನಿತ (ನಂದಿ), ಪುಟ್ಟಲಕ್ಷ್ಮಿ (ಭೃಂಗಿ), ರಾಮು (ತಾರಕಾಸುರ), ವಿನಾಯಕಭಟ್ ಹಾಸಣಗಿ(ಪುರೋಹಿತಮ, ಬೃಹಸ್ಪತಾಚಾರ್ಯ), ಗೀತ (ವೀರಭದ್ರ), ಕೃಷ್ಣಕುಮಾರ್ ನಾರ್ಣಕಜೆ (ಇಂದ್ರ, ಕೃಷ್ಣ), ಹೊಯ್ಸಳ (ಶೂರಪದ್ಮ), ಪ್ರದೀಪ್ (ಸಿಂಹವಕ್ತ್ರ), ಹುಲುಗಪ್ಪಕಟ್ಟೀಮನಿ (ಮನ್ಮಥ, ಪ್ರದ್ಯುಮ್ನ), ನಂದಿನಿ (ರತಿ), ಸರೋಜ ಹೆಗಡೆ (ಮಾಯಾವತಿ), ಪ್ರಶಾಂತ್ ಹಿರೇಮಠ (ಶಂಬರಾಸುರ), ವನಿತಾ (ರುಕ್ಮಿಣಿ), ಗೀತಾ( ಇಂದಿರೆ), ಶಶಿಕಲಾ (ತಾರೆ) ಕಾಣಿಸಿಕೊಳ್ಳಲಿದ್ದಾರೆ. ಡಾ.ತುಳಸಿ ರಾಮಚಂದ್ರ (ನೃತ್ಯ ಸಂಯೋಜನೆ), ಮಹೇಶ್‍ಕಲ್ಲತ್ತಿ (ಬೆಳಕು), ಬಿ.ಎಂ.ರಾಮಚಂದ್ರ (ವಸ್ತ್ರ) ತಾಂತ್ರಿಕ ಸಹಕಾರ ನೀಡುತ್ತಿದ್ದಾರೆ.

`ಮನ್ಮಥ ವಿಜಯ’ಯವು ಹಳೇ ಕಂಪನಿ ನಾಟಕವಾಗಿದೆ. 100 ವರ್ಷಗಳ ಹಿಂದೆ ಎ.ವಿ.ವರದಾಚಾರ್ಯರ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯು `ಮನ್ಮಥ ವಿಜಯ’ ಶಾಕುಂತಲ, ವಿರಾಟ ಪರ್ವ, ನಿರೂಪಮ ಸೇರಿದಂತೆ ನೂರಾರು ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶನ ಮಾಡಿತ್ತು. -ವೈ.ಎಂ.ಪುಟ್ಟಣ್ಣಯ್ಯ, ನಿರ್ದೇಶಕರು.

Translate »