14ನೇ ಹಣಕಾಸು ಯೋಜನೆಯ 9.80 ಲಕ್ಷ ದುರುಪಯೋಗ: ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್
ಮೈಸೂರು

14ನೇ ಹಣಕಾಸು ಯೋಜನೆಯ 9.80 ಲಕ್ಷ ದುರುಪಯೋಗ: ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್

July 26, 2018

ಮೈಸೂರು: 14ನೇ ಹಣಕಾಸು ಯೋಜನೆಯ 9.80 ಲಕ್ಷ ರೂ. ಹಣ ದುರುಪಯೋಗ ಆರೋಪದ ಮೇರೆಗೆ ರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಮೈಸೂರು ದಕ್ಷಿಣ (ಗ್ರಾಮಾಂತರ) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮೈಸೂರಿನ ವಿಜಯನಗರದಲ್ಲಿರುವ ಫ್ಯಾಷನ್ ಹಟ್ಸ್ ಅಂಗಡಿ ಮಾಲೀಕ ಮಂಜು ಮತ್ತು ಎಂ.ಲಿಂಗರಾಜ ಸ್ವಾಮಿ ಎಂಬುವರು 9.80 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಿ.ಲಿಂಗರಾಜಯ್ಯ, ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ವಿವರ: ರಮ್ಮನಹಳ್ಳಿ ಗ್ರಾಪಂನ ಅಭಿವೃದ್ಧಿ ಅಧಿಕಾರಿಯಾಗಿದ್ದ ಶಿವಕುಮಾರ್ 2017ರ ಸೆ.21ರಂದು ಹೆಚ್.ಡಿ.ಕೋಟೆ ತಾಲೂಕು ಹೈರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದು, ಅವರ ಸ್ಥಳಕ್ಕೆ ಗಣೇಶ್‍ಮೂರ್ತಿ ಬಂದಿದ್ದರು.

2017ರ ಡಿ.28 ಮತ್ತು 29ರಂದು ಕ್ರಮವಾಗಿ 4.80 ಲಕ್ಷ ಮತ್ತು 5 ಲಕ್ಷದಂತೆ ಒಟ್ಟು 9.80 ಲಕ್ಷ ರೂ. 14ನೇ ಹಣಕಾಸು ಯೋಜನೆಯ ಖಾತೆಯಿಂದ ನಗದೀ ಕರಣವಾಗಿತ್ತು. ವಿಚಿತ್ರವೆಂದರೆ ಈ ಮೊತ್ತಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ನಡೆದ ಬಗ್ಗೆಯಾಗಲೀ ಅಥವಾ ಸಾಮಗ್ರಿ ಖರೀದಿಸಿದ ಬಗ್ಗೆಯಾಗಲೀ ಯಾವುದೇ ವಿವರಗಳಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿ ಶಿವಕುಮಾರ್ ಮತ್ತು ಗ್ರಾಪಂ ಅಧ್ಯಕ್ಷೆ ರೇಖಾ ಅವರು ಸಹಿ ಮಾಡಿದ್ದ ಚೆಕ್‍ಗಳ ಮೂಲಕ ಮೈಸೂರಿನ ವಿಜಯನಗರದಲ್ಲಿರುವ ಫ್ಯಾಷನ್ ಹಟ್ಸ್‍ನ ಮಾಲೀಕ ಮಂಜು ಅವರ ಖಾತೆಗೆ 4.80 ಲಕ್ಷ ಮತ್ತು ಎಂ.ಲಿಂಗರಾಜ ಸ್ವಾಮಿ ಎಂಬುವರ ಖಾತೆಗೆ 5 ಲಕ್ಷ ರೂ. ವರ್ಗಾ ವಣೆಯಾಗಿರುವುದು ಕಂಡು ಬಂದಿದೆ. ಈ ಸಂಬಂಧ ಅಭಿವೃದ್ಧಿ ಅಧಿಕಾರಿ ಶಿವ ಕುಮಾರ್ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿ, ಅವರು ಹಣ ದುರುಪಯೋಗವಾಗಿರುವುದನ್ನು ಒಪ್ಪಿಕೊಂಡಿದ್ದಲ್ಲದೆ, 2018ರ ಜೂನ್ 18ರಂದು ಬ್ಯಾಂಕ್ ಮುಖಾಂತರ ಹಣವನ್ನು ಪಂಚಾಯಿತಿ ಖಾತೆಗೆ ಜಮೆ ಮಾಡಿ ಅದಕ್ಕೆ ಸಂಬಂಧಪಟ್ಟ ಬ್ಯಾಂಕ್ ಚಲನ್‍ಗಳನ್ನು ನೀಡಿದ್ದರು.

ಇದರಿಂದಾಗಿ ಹಣ ದುರುಪಯೋಗ ವಾಗಿರುವುದು ಕಂಡುಬಂದಿದ್ದು, ಮೇಲಿನ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ನೀಡಿದ ದೂರನ್ನು ಭಾರತ ದಂಡ ಸಂಹಿತೆ 408, 409, 420 ರ/ವಿ34ರಡಿ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ (ಗ್ರಾಮಾಂತರ) ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »