ಕಾಮುಕನಿಗೆ 10 ವರ್ಷ ಜೈಲು: ಡಿಎನ್‍ಎ ಪರೀಕ್ಷೆಯಿಂದ ಆರೋಪ ಸಾಬೀತು
ಮೈಸೂರು

ಕಾಮುಕನಿಗೆ 10 ವರ್ಷ ಜೈಲು: ಡಿಎನ್‍ಎ ಪರೀಕ್ಷೆಯಿಂದ ಆರೋಪ ಸಾಬೀತು

July 26, 2018

ಮೈಸೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭವತಿಯಾಗಲು ಕಾರಣನಾದ ಕಾಮುಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ತೀರ್ಪು ನೀಡಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಶಿವಕುಮಾರ್ (37) ಶಿಕ್ಷೆಗೆ ಗುರಿಯಾದ ಕಾಮುಕನಾಗಿದ್ದು, ಈತ 2016ರ ಫೆಬ್ರವರಿಯಲ್ಲಿ ತನ್ನ ಎದುರು ಮನೆಯ ಬುದ್ಧಿಮಾಂದ್ಯ ಯುವತಿ ಬಹಿರ್ದೆಸೆಗಾಗಿ ಮನೆಯಿಂದ ಹೊರಗೆ ಬಂದಾಗ ಆಕೆಯನ್ನು ತನ್ನ ಮನೆಯ ಟೆರೆಸ್‍ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈತ ಆಕೆಯ ಮೇಲೆ ಹಲವು ಬಾರಿ ಅತ್ಯಚಾರವೆಸಗಿ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಯುವತಿಯ ದೇಹದಲ್ಲಿ ಬದಲಾವಣೆ ಕಂಡುಬಂದಾಗ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಗರ್ಭವತಿಯಾಗಿರುವುದು ಪತ್ತೆಯಾಗಿದೆ. ಯುವತಿಯನ್ನು ವಿಚಾರಿಸಿದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯನ್ನು ಮದುವೆಯಾಗುವಂತೆ ಶಿವಕುಮಾರ್‍ನನ್ನು ಯುವತಿ ಪೋಷಕರು ಒತ್ತಾಯಿಸಿದಾಗ ಆತ ಕಾಲಹರಣ ಮಾಡುತ್ತಾ ಬಂದಿದ್ದು, ಬೇರೆ ಯುವತಿ ಜೊತೆ ನಿಶ್ಚಿತಾರ್ಥ ಮಾಡಿ ಕೊಂಡ ಕಾರಣ ಯುವತಿ ಪೋಷಕರು ಉದಯಗಿರಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ನಡುವೆ ಯುವತಿಗೆ ಗರ್ಭಪಾತವಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದ ಉದಯಗಿರಿ ಠಾಣೆಯ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್ ಅವರು ಯುವತಿ ಮತ್ತು ಶಿವಕುಮಾರ್‍ನ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‍ಎ ಪರೀಕ್ಷೆಗೆ ಒಳಪಡಿಸಿ ದಾಗ, ಆಕೆಯ ಗರ್ಭದಲ್ಲಿದ್ದ ಭ್ರೂಣಕ್ಕೆ ಶಿವಕುಮಾರನೇ ಕಾರಣವೆಂಬುದು ದೃಢಪಟ್ಟಿದೆ. ನಂತರ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಕಾಮುಕ ಶಿವಕುಮಾರನಿಗೆ 10 ವರ್ಷ ಕಠಿಣ ಜೈಲು ಹಾಗೂ 4 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಂತಪ್ಪ ವಾದ ಮಂಡಿಸಿದ್ದರು.

Translate »