ಪಿಂಜರಾಪೋಲ್ ಮಾದರಿ ನಾಯಿಗಳಿಗೊಂದು ಆಶ್ರಯ ತಾಣ
ಮೈಸೂರು

ಪಿಂಜರಾಪೋಲ್ ಮಾದರಿ ನಾಯಿಗಳಿಗೊಂದು ಆಶ್ರಯ ತಾಣ

July 26, 2018

ಮೈಸೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪಿಂಜರಾಪೋಲ್ ರೀತಿಯಲ್ಲೇ ಬೀದಿ ನಾಯಿಗಳನ್ನು ನೋಡಿಕೊಳ್ಳುವ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸುವುದಾಗಿ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಕೃಷ್ಣರಾಜ ಕ್ಷೇತ್ರದ ಹಿಂದಿನ 1 ಮತ್ತು 4ನೇ ವಾರ್ಡ್ ಸೇರಿ 51ನೇ ವಾರ್ಡ್‍ನ ಅಗ್ರಹಾರ, ರಾಮಾನುಜ ರಸ್ತೆ ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು.

ನಂತರ ಅವರು ಮಾತನಾಡಿ, ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವ್ಯಾಪಕ ದೂರು ಕೇಳಿಬಂದಿದ್ದು, ಅವುಗಳನ್ನು ಹಿಡಿದು ಬೇರೆಡೆಗೆ ಬಿಡುವುದು ಕಷ್ಟ ಸಾಧ್ಯ. ಪ್ರಾಣಿದಯಾ ಸಂಘದ ನಿಯಮದ ಪ್ರಕಾರ ಸಂತಾನಹರಣ ಚಿಕಿತ್ಸೆ ಮಾಡಿ ಅದೇ ಸ್ಥಳದಲ್ಲಿ ಬಿಡಬೇಕು. ಹಾಗಾಗಿ ಮುಂದಿನ ದಿನಗಳಲ್ಲಿ ಪಿಂಜರಾಪೋಲ್ ರೀತಿಯಲ್ಲೇ ಸರ್ಕಾರಿ ಜಾಗದಲ್ಲಿ ಬೀದಿ ನಾಯಿಗಳನ್ನು ನೋಡಿಕೊಳ್ಳುವ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸೊಳ್ಳೆಯಿಂದ ಬರುವ ಕಾಯಿಲೆಯನ್ನು ತಪ್ಪಿಸಲು ವೈದ್ಯ ಡಾ.ಚಂದ್ರಶೇಖರ್‍ರವರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತೆರೆದ ನೀರಿನ ಟ್ಯಾಂಕ್‍ಗೆ ನೀರು ತುಂಬಿಸಿ, ಗಪ್ಪಿ ಮೀನುಗಳನ್ನು ಬಿಟ್ಟಿದ್ದು, ಸೊಳ್ಳೆಗಳು ಇಲ್ಲಿ ಮೊಟ್ಟೆ ಇಡುವುದರಿಂದ ಗಪ್ಪಿ ಮೀನುಗಳು ಅವುಗಳನ್ನು ತಿನ್ನುತ್ತವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗಲಿದೆ. ಹಾಗೆಯೇ ಆಸ್ಪತ್ರೆ ಅವರಣದಲ್ಲಿ ಆಯುರ್ವೇದ ಗಿಡಗಳನ್ನು ಬೆಳೆಸುವಂತೆ ಅಧಿಕಾರಿಗಳಿಗೆ ಸೂಚಿಸಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದ ಯೋಜನೆಯಡಿ ಹೆಚ್ಚಿನ ಬೆಡ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಚಾಮರಾಜ ಜೋಡಿ ರಸ್ತೆಯ ಅಂಬಳೆ ಅಣ್ಣಯ್ಯ ಸರ್ಕಾರಿ ಪಿಯು ಕಾಲೇಜಿಗೆ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳೇ ಹೆಚ್ಚು ಬರುವುದರಿಂದ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಖಿಲ್ಲೆ ಮೊಹಲ್ಲಾದ ಭಾಗದಲ್ಲಿ ಹಳೇ ಮನೆಗಳೇ ಹೆಚ್ಚಾಗಿದ್ದು, ಜೋರು ಮಳೆಯಿಂದ ಮನೆಗಳು ಹಾನಿಗೊಳಗಾಗಿವೆ. ಹಾಗಾಗಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಿಸಬೇಕು. ಜತೆಗೆ ಪ್ರಯಾಣಿಕರಿಗೆ ಅನುಕೂವಾಗುವಂತೆ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಸ್ ತಂಗುದಾಣವನ್ನು ಹಿಂದಕ್ಕೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತ್ಯಾಗರಾಜ ರಸ್ತೆ ತುಂಬಾ ಕಿರಿದಾಗಿದ್ದು, ಗುರುವಾರ ದಿವಸ ಸಾಯಿಬಾಬಾ ಮಂದಿರಕ್ಕೆ ಭಕ್ತರು ಹೆಚ್ಚು ಆಗಮಿಸುವುದರಿಂದ ವಾಹನ ನಿಲುಗಡೆ ಮಾಡಲು ತೊಂದರೆಯಾಗುತ್ತಿದೆ. ಹಾಗಾಗಿ ಅಂದು ಈ ರಸ್ತೆಯನ್ನು ಪೊಲೀಸರು ಒನ್ ವೇ ಮಾಡಲು ತೀರ್ಮಾನಿಸಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ರಸ್ತೆಯಲ್ಲಿ ಫೀಡರ್ ಪಿಳ್ಳೇರ್ ಬಾಕ್ಸ್ ಅಳವಡಿಸುವ ಮೂಲಕ ವೈರ್ ಮುಕ್ತ ರಸ್ತೆಯನ್ನಾಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Translate »