ನಾಲ್ಕು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಆರು ಚಿಕುನ್‍ಗುನ್ಯಾ ಪ್ರಕರಣ ಪತ್ತೆ
ಮೈಸೂರು

ನಾಲ್ಕು ತಿಂಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಆರು ಚಿಕುನ್‍ಗುನ್ಯಾ ಪ್ರಕರಣ ಪತ್ತೆ

April 26, 2019

ಮೈಸೂರು: ಚಿಕುನ್‍ಗುನ್ಯಾ, ಡೆಂಗ್ಯೂ ಹಾಗೂ ಮಲೇರಿಯಾ ಜ್ವರಗಳಿಗೆ ಸೊಳ್ಳೆಯೇ ಮೂಲ ಕಾರಣ. ಸೊಳ್ಳೆ ನಿಯಂತ್ರಿಸಿದರೆ ಇವುಗಳಿಂದ ಮುಕ್ತವಾಗಬಹುದು. ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಏಪ್ರಿಲ್ 24ರವರೆಗೆ ಚಿಕುನ್ ಗುನ್ಯಾ ಜ್ವರದ 6 ಪ್ರಕರಣಗಳು ದಾಖಲಾಗಿವೆ. ಡೆಂಗ್ಯೂ ಹಾಗೂ ಮಲೇರಿಯಾ ಜ್ವರದ ಪ್ರಕರಣಗಳು ಎಲ್ಲಿಯೂ ವರದಿಯಾಗಿಲ್ಲ. ಈ ಅಂಕಿ-ಅಂಶವನ್ನು ಮೈಸೂರು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ನೀಡಿದ್ದು, ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಈ ಮೂರರ ಬಗ್ಗೆಯೂ ವ್ಯಾಪಕ ಜಾಗೃತಿ ಮೂಡಿಸಲಾಗು ತ್ತಿದೆ. ಡೆಂಗ್ಯೂ ಮತ್ತು ಚಿಕುನ್‍ಗುನ್ಯಾ ಜ್ವರ ಸೋಂಕು ಹೊಂದಿದ ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಬರಲಿದ್ದು, ಜೊತೆಗೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ. ಅದೇ ರೀತಿ ಮಲೇರಿಯಾ ಜ್ವರ ಅನಾಫಿಲಿಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 2012ರಲ್ಲಿ 72 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, 2017ರಿಂದ 2019ರ ಏಪ್ರಿಲ್ 24ರವರೆಗೆ ಈ ಸಂಬಂಧ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. 2012ರಲ್ಲಿ 4,22, 926 ರಕ್ತಲೇಪನ ಸಂಗ್ರಹದಲ್ಲಿ 72 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. ಅದೇ ರೀತಿ 2013ರಲ್ಲಿ 4,09, 224ರ ಪೈಕಿ 63, 2014ರಲ್ಲಿ 4,06,239ರ ಪೈಕಿ 54, 2015ರಲ್ಲಿ 4,63,888 ಪೈಕಿ 34, 2016ರಲ್ಲಿ 4,70,731ರ ಪೈಕಿ 43 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. 2017ರಲ್ಲಿ 5,56, 674 ಮತ್ತು 2018ರಲ್ಲಿ 6,16,815 ಹಾಗೂ 2019ರ ಜನವರಿ ಯಿಂದ ಏಪ್ರಿಲ್ 24ರವರೆಗೆ 1,47,100 ಮಂದಿ ರಕ್ತ ಪರೀಕ್ಷೆಗೆ ಒಳಪಟ್ಟಿದ್ದು, ಈ ಪೈಕಿ ಯಾವುದೇ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. 2012ರಿಂದ ಈವರೆಗೂ ಮಲೇರಿಯಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ. ಮಲೇರಿಯಾ ಸೋಂಕು ಕೂಡ ತಗುಲದಂತೆ ಇದನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಚಟು ವಟಿಕೆ ನಡೆಸುತ್ತಿದ್ದು, 2020ಕ್ಕೆ ಮೈಸೂರು ಜಿಲ್ಲೆಯನ್ನು ಮಲೇ ರಿಯಾ ಮುಕ್ತ ಜಿಲ್ಲೆಯಾಗಿಸುವ ಗುರಿ ಹೊಂದಲಾಗಿದೆ.

ಐವರನ್ನು ಬಲಿ ಪಡೆದ ಡೆಂಗ್ಯೂ: ಜಿಲ್ಲೆಯಲ್ಲಿ 2012ರಿಂದ ಈವರೆಗೆ ಐವರು ಡೆಂಗ್ಯೂಗೆ ಬಲಿಯಾಗಿದ್ದಾರೆ. 2013ರಲ್ಲಿ 334 ಪ್ರಕರಣಗಳು ಪತ್ತೆಯಾಗಿ ಮೂವರು ಹಾಗೂ 2017ರಲ್ಲಿ 843 ಪ್ರಕರಣಗಳು ಪತ್ತೆಯಾಗಿ ಇಬ್ಬರು ಸೇರಿದಂತೆ ಒಟ್ಟು ಐವರು ಈ ಜ್ವರದಿಂದ ಪ್ರಾಣ ಕಳೆದುಕೊಂಡಿದ್ದಾರೆ. 2012 ರಲ್ಲಿ 15, 2014ರಲ್ಲಿ 65, 2015ರಲ್ಲಿ 382, 2016ರಲ್ಲಿ 582, 2018ರಲ್ಲಿ 49 ಪ್ರಕರಣಗಳು ದಾಖಲಾಗಿದ್ದವು. 2019ರಿಂದ ಏ.24ರವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. 2019ರ ಜನವರಿಯಿಂದ ಏಪ್ರಿಲ್ 24ರವರೆಗೆ 6 ಚಿಕುನ್‍ಗುನ್ಯಾ ಪ್ರಕರಣಗಳು ದಾಖಲಾಗಿವೆ. ಇದು ಸಾಮಾನ್ಯವಾಗಿ ಮಾರಣಾಂತಿಕ ಕಾಯಿಲೆ ಅಲ್ಲ ಎನ್ನಲಾಗಿದೆ.

Translate »