ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ
ಮೈಸೂರು

ಗೆಲುವಿನ ವಿಶ್ವಾಸವಿದೆ, ನಾನು ಯಾವುದೇ ಸಮೀಕ್ಷೆ ಮಾಡಿಸಿಲ್ಲ

April 29, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರು ಭಾನುವಾರ ಮಂಡ್ಯಕ್ಕೆ ಆಗಮಿಸಿ ಅಭಿಮಾನಿ ಕುಟುಂಬಗಳ 2 ಮದುವೆಗೆ ಹಾಜರಾದರು. ಜಿಲ್ಲೆಯ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಅಪಘಾತದ ಗಾಯಾಳುವೊಬ್ಬರ ಆರೋಗ್ಯ ವಿಚಾರಿಸಿದರು. ಅಭಿಮಾನಿಗಳು ಮತ್ತು ಜನರೊಂದಿಗೆ ಮಾತುಕತೆ ನಡೆಸಿದರು. ಚುನಾವಣೆ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಎರಡನೇ ಭೇಟಿ ಇದಾಗಿದೆ.

ಸಮೀಕ್ಷೆ ನಂಬಲ್ಲ: ಈ ವೇಳೆ ಪತ್ರಕರ್ತರ ಕೆಲ ಪ್ರಶ್ನೆ ಗಳಿಗೆ ಉತ್ತರಿಸಿದ ಸುಮಲತಾ ಅಂಬರೀಶ್, ಚುನಾವಣೆ ಕುರಿತಂತೆ ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರ ಬರು ತ್ತಿವೆ. ಸಮೀಕ್ಷೆಗಳನ್ನು ನಾನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ನಾನ್ಯಾವುದೇ ಸರ್ವೆ ಮಾಡಿಸಿಲ್ಲ. ಏನೇ ಇದ್ದರೂ ಮೇ 23ರವರೆಗೆ ಕಾದು ನೋಡೋಣ. ನನಗೆ ಗೆಲುವಿನ ವಿಶ್ವಾಸವಂತೂ ಇದೆ ಎಂದು ಸ್ಪಷ್ಟಪಡಿಸಿದರು.

ದರ್ಶನ್ ಒಳ್ಳೆಯ ಸ್ಟೇಟ್‍ಮೆಂಟ್: ಸಾಲ ಮನ್ನಾಗಿಂತ ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ಎಂಬ ನಟ ದರ್ಶನ್ ಹೇಳಿಕೆಯನ್ನು ಸುಮಲತಾ ಬೆಂಬಲಿಸಿ ದರು. ದರ್ಶನ್ ನೀಡಿರುವುದು ತುಂಬಾ ಒಳ್ಳೆಯ ಸ್ಟೇಟ್ ಮೆಂಟ್. ಅದು ನನ್ನ ಮನದಾಳದ ಮಾತು ಕೂಡ ಆಗಿದೆ. ಯಾವುದೇ ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಆಗ ಮಾತ್ರ ರೈತರು ಸ್ವಾವಲಂಬಿ ಜೀವನ ನಡೆಸುತ್ತಾರೆ ಎಂದರು.

ಮದುವೆಗಳಿಗೆ ಹಾಜರಿ: ನಗರದ ಕನಕ ಸಮುದಾಯ ಭವನದಲ್ಲಿ ನಡೆದ ಬಸರಾಳು ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಸ್ಥಳೀಯ ಮುಖಂಡ ಕೆಂಚನಹಳ್ಳಿ ರಾಜು ಅವರ ಮಗಳ ಮದುವೆಯಲ್ಲಿ ಪಾಲ್ಗೊಂಡ ಸುಮಲತಾ, ನೂತನ ವಧು -ವರರಿಗೆ ಆಶೀರ್ವದಿಸಿದರು. ನಂತರ ಮರಕಸಲಾಗೆರೆ ಗ್ರಾಮಕ್ಕೆ ಭೇಟಿ ನೀಡಿ ಸಂತೋಷ್ ಮತ್ತು ಸಹನ ಜೋಡಿಯ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಗಾಯಾಳು ಭೇಟಿ: ಚುನಾವಣಾ ಪ್ರಚಾರದ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿ ಮನೆಗೂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಮನೆ ದೇವರ ದರ್ಶನ: ಅಂಬರೀಶ್ ಹುಟ್ಟೂರು ದೊಡ್ಡರಸಿನಕೆರೆ ಹಾಗೂ ಪಕ್ಕದ ಚಿಕ್ಕರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಿದ ಸುಮಲತಾ, ಅಲ್ಲಿ ಮನೆದೇವರ ದರ್ಶನ ಪಡೆದರು. ಈ ವೇಳೆ ಮದನ್, ಕೆಪಿಸಿಸಿ ಉಚ್ಛಾಟಿತ ಸದಸ್ಯ ಇಂಡುವಾಳು ಸಚ್ಚಿದಾನಂದ, ಅಂಬರೀಶ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೊಮಶೇಖರ್ ಜತೆಗಿದ್ದರು.

ಸಿಎಸ್‍ಆರ್ ಕುಶಲೋಪರಿ: ಮಂಡ್ಯದ ಕನಕ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡ ಕೆಂಚನಹಳ್ಳಿಯ ರಾಜು ಅವರ ಪುತ್ರಿಯ ಮದುವೆಯಲ್ಲಿ ಸುಮಲತಾ ಅವರು ತಮಗೆ ಎದುರಾದ ಚಲುವರಾಯಸ್ವಾಮಿ ಅವರ ಕುಶಲ ವಿಚಾರಿಸಿದರು. ಇಬ್ಬರೂ ಕೆಲ ಕ್ಷಣ ಮಾತನಾಡಿದರು. ಏ.18ರ ಮತದಾನ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಇಬ್ಬರೂ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಜಕೀಯವೇನೂ ಮಾತನಾಡಿಲ್ಲ. ಜನರಲ್ ಡಿಸ್ಕಶನ್ ಅಷ್ಟೆ. `ಚುನಾವಣೆ ಮುಗಿದಿದೆ, ಸ್ವಲ್ಪ ರೆಸ್ಟ್ ಮಾಡಿ’ ಎಂದು ಸಿಆರ್‍ಎಸ್ ಸಲಹೆ ನೀಡಿದರು ಎಂದು ಸುಮಲತಾ ಚುಟುಕಾಗಿ ಪ್ರತಿಕ್ರಿಯಿಸಿದರು.

ಸ್ವಾಭಿಮಾನದ ಪರ ಫಲಿತಾಂಶ ಸಾಧ್ಯತೆ; ಮೇ 23ರವರೆಗೂ ತಾಳ್ಮೆಯಿಂದಿರುತ್ತೇವೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರೇ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದ ಕನಕ ಸಮುದಾಯ ಭವನದಲ್ಲಿ ಇಂದು ಬಸರಾಳು ಗ್ರಾಪಂ ಸದಸ್ಯ ಕೆಂಚನಹಳ್ಳಿ ರಾಜು ಅವರ ಮಗಳ ಮದುವೆಗೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ಅಭಿಪ್ರಾಯ ಮತಯಂತ್ರದಲ್ಲಿ ಸಂಗ್ರಹವಾಗಿದೆ. ಮೇ 23ಕ್ಕೆ ಅದು ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆ ಗಳಲ್ಲಿ ಜನರು ಸುಮಲತಾ ಅಂಬರೀಷ್ ಪರ ನಿಂತಿರುವುದಾಗಿ ಹೇಳಲಾಗುತ್ತಿದೆ. ಆದರೂ ಈಗಲೇ ವಿಜಯದ ಸಂಭ್ರಮ ಆಚರಿಸುವುದಿಲ್ಲ. ಬದಲಿಗೆ ಫಲಿತಾಂಶ ಪ್ರಕಟವಾಗುವವರೆಗೂ ಕಾಯುತ್ತೇವೆ. ಆ ತಾಳ್ಮೆ ನಮಗಿದೆ ಎಂದರು.

ಸ್ವತಃ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಲ್ಲದೆ ರಾಜ್ಯ ಸರ್ಕಾರದ ಪ್ರಮುಖ ಸಚಿವರು, ಜೆಡಿಎಸ್‍ನ 15-20 ಮುಖಂಡರು ಮಂಡ್ಯದಲ್ಲೇ ಠಿಕಾಣಿ ಹೂಡಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಚಿವ ಡಿ.ಕೆ. ಶಿವಕುಮಾರ್ ಮತ್ತಿತರರು ಮಂಡ್ಯದಲ್ಲಿ ಪ್ರಚಾರ ಮಾಡಿದ್ದಾರೆ. ಹೀಗಿದ್ದೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಮೀಕ್ಷೆಯ ವರದಿ ಬಂದರೆ ಅವರಿಂದ ಸಹಿಸಲು ಸಾಧ್ಯವೇ? ಎಂದು ಸಿಆರ್‍ಎಸ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಫಲಿತಾಂಶದ ಬಗ್ಗೆ ಅವರಿಗೆ ತಿಳಿದಂತೆ, ಬೇಕಾದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸು ವುದು ಸಹಜ. ಆದರೆ, ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಿಖಿಲ್ ವಿರುದ್ಧ ಅಭಿಪ್ರಾಯ ಗಳು ಕೇಳಿ ಬಂದಿರುವುದರಿಂದ ಕುಮಾರಸ್ವಾಮಿ ಅವರಲ್ಲದೆ ಜೆಡಿಎಸ್‍ನ ಹಲವು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಹಜವಾಗಿ ಹತಾಶೆಯುಂಟಾಗಿದೆ ಎಂದರು.
ಸ್ವಾಭಿಮಾನದ ಚುನಾವಣೆ: ಪಕ್ಷೇತರ ಅಭ್ಯರ್ಥಿ ಸುಮಲತಾ ಸ್ವಾಭಿಮಾನದ ಚುನಾ ವಣೆ ಮಾಡಿದ್ದು, ಅವರ ಪರ ನಟರಾದ ದರ್ಶನ್, ಯಶ್ ಸೇರಿ ಕೆಲವೇ ಮುಖಂಡರು ದುಡಿದಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಸಿಎಂ ಹೆಚ್‍ಡಿಕೆ ಸೇರಿ ಇಡೀ ಸರ್ಕಾರ ದುಡಿದಿದೆ. ಮೇ 23ರಂದು ಫಲಿತಾಂಶ ಬಂದ ನಂತರ ಈ ಬಗ್ಗೆ ಇನ್ನಷ್ಟು ಮಾತಾಡುತ್ತೇನೆ ಎಂದು ನಗೆ ಬೀರಿದರು.

ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿರುವ ಸಚಿವ ಸಿ.ಎಸ್. ಪುಟ್ಟರಾಜು ವಿಚಾರವಾಗಿ ಪ್ರತಿಕ್ರಿಯಿಸಿದ ಸಿಆರ್‍ಎಸ್, ಅವರೆಲ್ಲಾ ದೊಡ್ಡವರು. ದೊಡ್ಡವರ ಜೊತೆ ನಾವೆಲ್ಲಾ ವಾದ ಮಾಡೋಕಾಗುತ್ತಾ? ಅವರೇ ಈ ಬಗ್ಗೆ ತೀರ್ಮಾನ ಮಾಡು ತ್ತಾರೆ. ನಾನು ಅವರ ಬಗ್ಗೆ ಚರ್ಚೆ ಮಾಡಲ್ಲ. ಸಿಎಂ ಬದಲಾವಣೆ ವಿಚಾರವಾಗಿಯೂ ಈಗೇನೂ ಚರ್ಚೆ ಮಾಡಲ್ಲ ಎಂದು ಮಾರ್ಮಿಕವಾಗಿ ನುಡಿದರು. ಸುಮಲತಾ ಅವರಿಗೆ ಚಲುವರಾಯಸ್ವಾಮಿ ಬೆಂಬಲ ನೀಡಿದ್ದಾರೆ ಎಂಬ ವಿಚಾರ ಚರ್ಚೆಯಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, `ಚರ್ಚೆ ಆಗಲಿ ಬಿಡಿ, ನಮದೇನೂ ಅಭ್ಯಂತರವಿಲ್ಲ’ ಎಂದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಜಿ.ಸಿ.ಆನಂದ್ ಮತ್ತಿತರರು ಇದ್ದರು.

Translate »