ಮೈಸೂರು ಸಂಚಾರ ಪೊಲೀಸರಿಗೆ `ಮೈಗ್ರಾಪ’ ಪ್ರಶ್ನೆಗಳ ಸುರಿಮಳೆ
ಮೈಸೂರು

ಮೈಸೂರು ಸಂಚಾರ ಪೊಲೀಸರಿಗೆ `ಮೈಗ್ರಾಪ’ ಪ್ರಶ್ನೆಗಳ ಸುರಿಮಳೆ

December 10, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆ ಅಧಿ ಕಾರಿಗಳು, ಸಂಚಾರ ಪೊಲೀಸರ ಜೊತೆ ಚರ್ಚಿಸದೆ, ನಗರದ ಪ್ರಮುಖ ರಸ್ತೆಗಳಿಗೆ ಡುಬ್ಬ ಹಾಗೂ ಡಿವೈಡರ್‍ಗಳನ್ನು ಅಳ ವಡಿಸುತ್ತಾರೆ. ಅಲ್ಲದೆ, ನಮ್ಮ ಇಲಾಖೆ ಯಿಂದ ಸಂಚಾರ ನಿರ್ವಹಣೆ ಬಗ್ಗೆ ಸಾರ್ವ ಜನಿಕರ ಅಭಿಪ್ರಾಯವನ್ನು ಕ್ರೋಢೀಕರಿಸಿ ಕಳುಹಿಸಿ ಕೊಡುವ ಪಟ್ಟಿಗೆ ಹಣಕಾಸಿನ ಕೊರತೆ ಎಂದು ಸಬೂಬು ಹೇಳುತ್ತಾರೆ ಎಂದು ವಿವಿ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಸಿ.ವಿ.ರವಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಯಾದವಗಿರಿ ಮೈಗ್ರಾಪ ಕಚೇರಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಸಾಮಾನ್ಯ ಸಭೆಯಲ್ಲಿ ಮೈಗ್ರಾಪ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೈಸೂರಲ್ಲಿ 50 ಕಡೆ ಸಿಗ್ನಲ್ ಲೈಟ್ ಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಸಿಗ್ನಲ್ ಗಳಲ್ಲೂ ಸಿಸಿಟಿವಿ ಕ್ಯಾಮರ ಅಳವಡಿಸಲಾ ಗಿದ್ದು, ಇದರಲ್ಲಿ ಎರಡು ಕ್ಯಾಮರಾಗಳು ಕೆಟ್ಟಿವೆ. ಇದನ್ನು ಆದಷ್ಟು ಬೇಗನೆ ರಿಪೇರಿ ಮಾಡಿಸಲಾಗುವುದು ಎಂದರು.

ಮೈಸೂರು ನಗರದಲ್ಲಿ ಸಂಚಾರ ನಿರ್ವ ಹಣೆ ಸರಿಯಾಗಿಲ್ಲ. ನಗರದ ಹೃದಯ ಭಾಗದ ಫುಟ್‍ಪಾತ್‍ಗಳಾದ ಸಯ್ಯಾಜಿ ರಾವ್ ರಸ್ತೆ, ಅಶೋಕ ರಸ್ತೆ, ಚಾಮರಾಜ ಜೋಡಿ ರಸ್ತೆ, ಆರ್‍ಟಿಓ ವೃತ್ತ, ಗಾಂಧಿ ಚೌಕ, ಧನ್ವಂತರಿ ರಸ್ತೆ, ದೇವರಾಜ ರಸ್ತೆ ನಾರಾಯಣ ಶಾಸ್ತ್ರಿ ರಸ್ತೆ, ಅಗ್ರಹಾರ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿ ಗಳ ಬೇಕಾಬಿಟ್ಟಿ ವ್ಯಾಪಾರ, ವಾಹನ ಸವಾರ ರಿಂದ ಸಿಗ್ನಲ್ ಜಂಪಿಂಗ್ ಸೇರಿದಂತೆ ಸಂಚಾರ ನಿರ್ವಹಣೆಯ ಹತ್ತು-ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

ನಗರದಲ್ಲಿ ಅವೈಜ್ಞಾನಿಕ ರಸ್ತೆ ಡುಬ್ಬಗಳ ನಿರ್ಮಾಣದಿಂದ ವಾಹನಗಳ ಅಪಘಾತ ಹೆಚ್ಚುತ್ತಿದೆ. ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚಾರ ಪೊಲೀಸರ ಕಾರ್ಯಾಚರಣೆ ಮಾಡುವುದಿಲ್ಲ ಎಂಬ ಆರೋಪದ ಬಗ್ಗೆ ರವಿ ಅವರ ಗಮನ ಸೆಳೆದಾಗ, ಅವರು, ನಗರದಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಸಂಚಾರ ಪೊಲೀಸರು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರಿಂ ದಲೂ ಸಹಕಾರ ಬೇಕು. ಹೆಲ್ಮೆಟ್ ಇಲ್ಲದೆ, ಬೈಕ್ ಚಾಲನೆ ಮಾಡುವುದು ಸೇರಿದಂತೆ ದಿನನಿತ್ಯ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಸಾವಿರದ ಗಡಿ ದಾಟುತ್ತದೆ. ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿ, ದಂಡ ಕಟ್ಟದೇ ಇರುವವರ ಸಂಖ್ಯೆಯೂ ಲಕ್ಷಾಂತರವಿದೆ ಎಂದು ಸಭೆಯ ಗಮನ ಸೆಳೆದರು.

ಮೈಸೂರು ಸಬರ್ಬನ್ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರ ವಾಹನ ನಿಲ್ದಾಣಕ್ಕೆ ಸ್ಥಳಾವಕಾಶವೇ ಇಲ್ಲ. ಒಂದೆಡೆ ಟ್ಯಾಕ್ಸಿ ಸ್ಟ್ಯಾಂಡ್‍ನವರು ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ. ಬಸ್ ನಿಲ್ದಾಣದ ಎದುರು ಆಟೋ ರಿಕ್ಷಾಗಳ ಹಾವಳಿ ಹೆಚ್ಚಾ ಗಿದ್ದು, ಸಾರ್ವಜನಿಕರು ತಮ್ಮ ವಾಹನದಲ್ಲಿ ಬಸ್ ನಿಲ್ದಾಣದ ಕಡೆಗೆ ಬರುವುದೇ ದುಸ್ತರ ವಾಗಿದೆ. ಆದರೂ ಸಂಚಾರ ಪೊಲೀಸರು ತಲೆಕೆಡಿಸಿಕೊಂಡಿಲ್ಲ ಎಂದು ರವಿ ಅವರ ಗಮನ ಸೆಳೆದಾಗ, ಈ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.

ವಿಶ್ವ ಮಾನದ ಜೋಡಿ ರಸ್ತೆಯ ಬೇಕ್ ಪಾಯಿಂಟ್ ಎದುರಿನ ಸಿಗ್ನಲ್ ಲೈಟ್‍ನಲ್ಲಿ ಅವೈಜ್ಞಾನಿಕವಾಗಿ ವೃತ್ತ ನಿರ್ಮಾಣ ಮಾಡ ಲಾಗುತ್ತಿದೆ. ಇದು ವಾಹನಗಳ ತಿರುವಿಗೆ ತೀವ್ರ ತೊಂದರೆಯಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಅನಗತ್ಯವಾಗಿ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಮೈಗ್ರಾಪ ಸದಸ್ಯ ರೊಬ್ಬರು ಸಭೆ ಗಮನ ಸೆಳೆದಾಗ, ನಮ್ಮ ಇಲಾಖೆಯಿಂದ ಬರೆಯುವ ಪತ್ರಗಳಿಗೆ ಸಾರಿಗೆ ಇಲಾಖೆ, ಮಹಾನಗರ ಪಾಲಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ ಎಂದು ರವಿ ಅವರು ಬೇಸರ ಹೊರಹಾಕಿದರು.
ಜನಸಂದಣಿ ಹೆಚ್ಚಿರುವ ಕಡೆ, ಫುಟ್ ಪಾತ್ ಅತಿಕ್ರಮಿಸಿ ವ್ಯಾಪಾರ ಮಾಡುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಸಾಧ್ಯವಿಲ್ಲವೇ? ಅಥವಾ ಫುಟ್‍ಪಾತ್ ವ್ಯಾಪಾರಿಗಳಿಂದ ಪೊಲೀಸ್ ಇಲಾಖೆಯ ಹಿರಿಯ-ಕಿರಿಯ ಸಿಬ್ಬಂದಿಗಳಿಗೆ ಮಮೂಲಿ ಹೋಗುತ್ತಿದೆ ಎಂಬ ಆರೋಪ ವಿದೆ. ಇದು ನಿಜವೇ? ಎಂದು ಪ್ರಶ್ನಿಸಿದ ಮೈಗ್ರಾಪ ಸದಸ್ಯ ರೊಬ್ಬರು, ಇದರಿಂದ ಹಿರಿಯ ನಾಗರಿಕರು ಮತ್ತು ಪಾದಚಾರಿಗಳಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ರವಿ ಅವರು, ಪೊಲೀ ಸರು ಯಾವುದೇ ವಸೂಲಿ ದಂಧೆಯಲ್ಲಿ ಭಾಗಿಯಾಗಿಲ್ಲ. ಹಾಗೊಂದು ವೇಳೆ ನಿಮಗೆ ಅನುಮಾನವಿದ್ದರೆ, ದಾಖಲೆ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡ ಬಹುದು ಎಂದು ಹೇಳಿದರಲ್ಲದೆ, ತಮ್ಮ ಇಲಾಖೆಯ ಸಿಬ್ಬಂದಿ ಮೇಲಿನ ಆರೋಪ ವನ್ನು ಅಲ್ಲಗೆಳೆದರು.

ಸಭೆಯಲ್ಲಿ ಮೈಸೂರು ಗ್ರಾಹಕರ ಪರಿ ಷತ್ ಕಾರ್ಯಾಧ್ಯಕ್ಷೆ ಪ್ರೊ.ಎಸ್. ಶೋಭನಾ, ಭಾಮಿ ವಿ.ಶೆಣೈ, ಉಷಾ ನಾರಂಗ್, ಪಿ.ಎಂ.ಭಟ್, ಮಹೇಶ್, ದೀಪ ಕುಮಾರಸ್ವಾಮಿ, ಯದುರಾಜ್, ಉಷಾ ರಾಜ್, ಟಿ.ಮಹೇಂದ್ರಕುಮಾರ್, ಬಿ.ಎಸ್. ಸೋಮಶೇಖರ್, ರವಿಚಂದ್ರ, ಕೌಶಿಕ್, ಕೆ.ಆರ್.ಜೋಶಿ, ಕೆ.ಎಸ್.ರಾವ್, ಚಂದ್ರ ಪ್ರಕಾಶ್, ಗಂಗಾಪ್ರಸಾದ್, ಹೆಚ್.ಎಲ್. ಯಮುನಾ, ಎಂ.ಜಾನಕಿ ರಾಮನ್, ಅರುಣ್ ಕುಮಾರ್, ಹೆಚ್.ಜಿ.ನಾರಾಯಣ್, ಜಿ.ಎಸ್.ರಾಜಗೋಪಾಲ್, ಸಿ.ಜಿ.ನರ ಸಿಂಹನ್ ಸೇರಿದಂತೆ ಇತರರಿದ್ದರು.

Translate »