ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ
ಮೈಸೂರು

ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ಅಭಿವೃದ್ಧಿಗೆ ಹೆಚ್ಚು ಸ್ಪಂದಿಸಿದ ಜಿಟಿಡಿ

December 10, 2018

ಸಂಸದ ಪ್ರತಾಪಸಿಂಹರಿಂದ ಜಿ.ಟಿ. ದೇವೇಗೌಡರ ಗುಣಗಾನ

ಮೈಸೂರು: ವಾರ್ಷಿಕ 33 ಲಕ್ಷ ಪ್ರವಾಸಿಗರು ಭೇಟಿ ನೀಡುವ ಮೈಸೂರಿನ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಉತ್ತಮವಾಗಿ ಸ್ಪಂದಿಸಿದ್ದರ ಪರಿಣಾಮವಾಗಿ ವಿಮಾನ ನಿಲ್ದಾಣ ಮತ್ತು ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯಲು ನೆರವಾಗಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಇಂದಿಲ್ಲಿ ಸಚಿವ ಜಿ.ಟಿ.ದೇವೇಗೌಡರ ಬಗ್ಗೆ ಅಪಾರ ಗುಣಗಾನ ಮಾಡಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎ-3, ಎ-4 ವಿಮಾನಗ ಳನ್ನು ಇಳಿಸಲು ತೊಂದರೆಯಾಗಿದ್ದು, ಒಂದು ಕಡೆ ರೈಲ್ವೆ ಲೈನ್, ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿ ಇರುವ ಹಿನ್ನೆಲೆಯಲ್ಲಿ ಅಭಿವೃಧ್ದಿಪಡಿಸಲು ತೊಂದರೆಯಾಗಿತ್ತು. ಅಗತ್ಯವಿದ್ದ 289 ಎಕರೆ ಭೂ ಸ್ವಾಧೀನಕ್ಕಾಗಿ 4 ವರ್ಷದಿಂದ ಪ್ರಯತ್ನ ನಡೆದಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಆ ಸಮಸ್ಯೆಯನ್ನು ಹೆಚ್ಚು ಮುತುವರ್ಜಿಯಿಂದ ನಿವಾರಿಸಿಕೊಟ್ಟಿ ದ್ದಾರೆ. 300 ಎಕರೆಯಷ್ಟು ಭೂ ಸ್ವಾಧೀನವಾಗುತ್ತಿದೆ. ಕೇಂದ್ರ ಸರ್ಕಾರ 700 ಕೋಟಿ ರೂ. ಬಿಡುಗಡೆ ಮಾಡಿದೆ. ಜನವರಿ ತಿಂಗಳಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಲಿದೆ. ಒಂದೂವರೆ ವರ್ಷದೊಳಗೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಪ್ರತಾಪಸಿಂಹ ತಿಳಿಸಿದರು.
ರೈಲ್ವೆ ಡಬ್ಲಿಂಗ್ ಕಾಮಗಾರಿಗೆ ಅಡ್ಡವಾಗಿದ್ದ ಶ್ರೀರಂಗಪಟ್ಟಣದ ಟಿಪ್ಪು ಸ್ಮಾರಕ ಸ್ಥಳಾಂತರ ಮಾಡಲಾಗಿದ್ದು, ಡಬ್ಲಿಂಗ್ ಕಾರ್ಯ ಪೂರ್ಣಗೊಳಿಸಲಾಗಿತ್ತು. ಅನೇಕ ಹೊಸ ರೈಲುಗಳನ್ನು ತರಲಾಗಿತ್ತು. ಪಿಟ್ ಲೈನ್ ಮತ್ತು ವಿಸ್ತರಣೆಗೆ ಅವಕಾಶವಾಗದ ಕಾರಣ ಇಂಟರ್‍ಸಿಟಿ ರೈಲುಗಳನ್ನು ತರಲಾಗಿರಲಿಲ್ಲ. ಇದಕ್ಕಾಗಿ ಹೊಸ ಟರ್ಮಿನಲ್ ನಿರ್ಮಿಸಲು 789 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲು ಜಾಗದ ಅವಶ್ಯಕತೆ ಇತ್ತು. ಇದನ್ನೂ ಸಹ ಸಚಿವ ಜಿ.ಟಿ.ದೇವೇಗೌಡರು ಬಹಳ ಸುಲಭವಾಗಿ ಮಾಡಿಕೊಟ್ಟು, ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದರು.

ಜಿ.ಟಿ.ದೇವೇಗೌಡರು ತಮ್ಮದೇ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿಯಲ್ಲಿ 400 ಎಕರೆ ಜಾಗವನ್ನು ರೈತರ ಜೊತೆಗೆ ಚರ್ಚಿಸಿ, ಭೂ ಸ್ವಾಧೀನವೂ ಆಗಿದೆ. ಶೇ.82ರಷ್ಟು ಭೂ ಸ್ವಾಧೀನ ಪೂರ್ಣಗೊಂಡಿದ್ದು, ಜನವರಿಯಲ್ಲಿ ವಿದ್ಯುಕ್ತವಾಗಿ ಹೊಸ ಟರ್ಮಿನಲ್ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಸುಮಾರು 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸ ಲಾಗಿದೆ ಎಂದು ಪ್ರತಾಪಸಿಂಹ ಹೇಳಿದರು.

ಹೊಸ ಟರ್ಮಿನಲ್ ನಿರ್ಮಾಣಗೊಂಡರೆ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಈ 6 ನಗರಗಳಿಗೂ 55 ಕಿ.ಮೀ. ಬೈಪಾಸ್ ನಿರ್ಮಾಗೊಳ್ಳ ಲಿದೆ. ಇದಕ್ಕಾಗಿ 7000 ಕೋಟಿ ರೂ. ಕೇಂದ್ರದಿಂದ ಮಂಜೂ ರಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಮೈಸೂರು- ಬೆಂಗಳೂರು ನಡುವೆ ಕೇವಲ ಒಂದೂವರೆ ಗಂಟೆಯಲ್ಲಿ ಪ್ರಯಾಣಿಸಬಹು ದಾಗಿದೆ ಎಂದು ಹೇಳಿದರು. ಮೈಸೂರು ಸುತ್ತ ಇರುವ ರಿಂಗ್ ರಸ್ತೆಯಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟು ಬೆಳೆಸಿದ್ದು, ಸರ್ವಿಸ್ ರಸ್ತೆಗಳಲ್ಲೂ 8000 ಗಿಡಗಳನ್ನು ನೆಡಲಾಗಿದೆ. ಇದರಿಂದ ಮೈಸೂರಿನ ಸೌಂದರ್ಯವೂ ಹೆಚ್ಚಲಿದೆ. ಮೈಸೂರು ವನಗಳ ನಾಡಾಗಿ ಪರಿವರ್ತನೆಯಾಗಲಿದೆ ಎಂದ ಸಂಸದರು, ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯ ಶ್ರಮವನ್ನು ಶ್ಲಾಘಿಸಿದರು.

Translate »