ನಾಳೆಯಿಂದ ಮೈಸೂರಲ್ಲಿ ವಿವಿಧ ರಾಜ್ಯದ ಪ್ರಖ್ಯಾತ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ
ಮೈಸೂರು

ನಾಳೆಯಿಂದ ಮೈಸೂರಲ್ಲಿ ವಿವಿಧ ರಾಜ್ಯದ ಪ್ರಖ್ಯಾತ ರೇಷ್ಮೆ ಸೀರೆಗಳ ಪ್ರದರ್ಶನ, ಮಾರಾಟ

July 10, 2018

ಮೈಸೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಜು.11ರಿಂದ 16ರವರೆಗೆ 18 ರಾಜ್ಯಗಳ ರೇಷ್ಮೆ ನೇಕಾರರಿಂದ `ಸಿಲ್ಕ್ ಇಂಡಿಯಾ-2018’ ರೇಷ್ಮೆ ಸೀರೆಗಳ ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹಸ್ತಶಿಲ್ಪಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ತಯಾರಾಗುವ ರೇಷ್ಮೆ ಸೀರೆಗಳು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಕಳೆದ ಏಳು ವರ್ಷದಿಂದ ಹಸ್ತಶಿಲ್ಪಿ ಸಂಸ್ಥೆಯ ವತಿಯಿಂದ ಸಿಲ್ಕ್ ಇಂಡಿಯಾ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಡೆಸುತ್ತಾ ಬಂದಿದೆ. ದೇಶದುದ್ದಗಲಕ್ಕೂ ವರ್ಷಕ್ಕೆ 60ರಿಂದ 70 ನಗರಗಳಲ್ಲಿ ರೇಷ್ಮೆ ಸೀರೆಗಳ ಮಾರಾಟ ಮೇಳ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆ 5 ಲಕ್ಷ ಗ್ರಾಹಕರನ್ನು ಹೊಂದಿದೆ. ದೇಶದ 18 ರಾಜ್ಯಗಳಲ್ಲಿ ಹೆಸರಾಂತ ರೇಷ್ಮೆ ನೇಕಾರರು ಪಾಲ್ಗೊಳ್ಳುವ ಮೇಳದಲ್ಲಿ 1800 ರೂ ನಿಂದ 1.30 ಲಕ್ಷ ರೂವರೆಗಿನ ರೇಷ್ಮೆ ಸೀರೆಗಳನ್ನು ಮಾರಾಟಕ್ಕಿಡಲಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ ನಡೆಸಿದ ಸಿಲ್ಕ್ ಇಂಡಿಯಾ ಮೇಳದಲ್ಲಿ 60 ಲಕ್ಷ ವಹಿವಾಟು ನಡೆದಿತ್ತು. ಮೈಸೂರಿನಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನರಿಗೆ ಅವರದ್ದೇ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆಗಳು ಈ ಮೇಳದಲ್ಲಿ ಲಭ್ಯವಾಗುವುದರಿಂದ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಪ್ರತಿ ವರ್ಷವೂ ವ್ಯಕ್ತವಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬವನ್ನು ಮುಂದಿಟ್ಟುಕೊಂಡು ಈ ಮೇಳ ನಡೆಸಲಾಗುತ್ತಿದ್ದು, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ವೈವಿಧ್ಯದ ಹಾಗೂ ಕಲಾತ್ಮಕವಾದ ರೇಷ್ಮೆಗಳು ಸೀರೆಗಳು ಮೇಳದಲ್ಲಿ ದೊರೆಯಲಿವೆ. ನೇಕಾರರೇ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಮಾರುಕಟ್ಟೆ ದರಕ್ಕಿಂತ ರಿಯಾಯಿತಿ ದರದಲ್ಲಿ ಸೀರೆಗಳು ಗ್ರಾಹಕರ ಕೈ ಸೇರಲಿವೆ. ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್, ಅರಿಣ , ಧರ್ಮಾವರಂ, ಕಾಂಚಿಪುರಂ, ರಾ ಸಿಲ್ಕ್, ಕೋಸಾ ಸೀರೆ, ಕಲ್ಕತ್ತಾ ಗಣಪತಿ ಸೀರೆ, ಢಾಕ, ಎಂಬ್ರಾಯಿಡರಿ ಸೀರೆ, ಬಲ್‍ಚೂರಿ ರೇಷ್ಮೆ ಸೀರೆ, ಮಟ್ಕಾ ಸೀರೆ, ಬನಾರಸ್, ಗೊಡ್ವಾಲ್ ಸೀರೆ ಸೇರಿದಂತೆ ವಿವಿಧ ರಾಜ್ಯಗಳ ಸೀರೆಗಳು ಮಾರಾಟಕ್ಕಿಡಲಾಗುತ್ತದೆ. ಆರು ದಿನಗಳ ಕಾಲ ನಡೆಯುವ ಸಿಲ್ಕ್ ಇಂಡಿಯಾ ಮೇಳಕ್ಕೆ ಉಚಿತ ಪ್ರವೇಶವಿದ್ದು, ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಪ್ರದರ್ಶನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದರು.

ಚಾಲನೆ: ಹಸ್ತಶಿಲ್ಪಿ ಸಂಸ್ಥೆ ಆಯೋಜಿಸಿರುವ ಸಿಲ್ಕ್ ಇಂಡಿಯಾ ರೇಷ್ಮೆ ಸೀರೆಗಳ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಜು.11ರಂದು ಸಂಜೆ 4ಕ್ಕೆ ಸಂಸದ ಪ್ರತಾಪಸಿಂಹ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪಮೇಯರ್ ಇಂದಿರಾ ಮಹೇಶ್ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಹಸ್ತಶಿಲ್ಪಿ ಸಂಸ್ಥೆಯ ಸಂಯೋಜಕ ಶ್ರೀಕಾಂತ್ ಇದ್ದರು.

Translate »