ಚಿತ್ರ ನಗರಿ ರಾಮನಗರಕ್ಕೆ ಸ್ಥಳಾಂತರಿಸಿದರೆ ಹೋರಾಟ: ಬಿಜೆಪಿ ಮುಖಂಡ ಜೆಪಿ ಎಚ್ಚರಿಕೆ
ಮೈಸೂರು

ಚಿತ್ರ ನಗರಿ ರಾಮನಗರಕ್ಕೆ ಸ್ಥಳಾಂತರಿಸಿದರೆ ಹೋರಾಟ: ಬಿಜೆಪಿ ಮುಖಂಡ ಜೆಪಿ ಎಚ್ಚರಿಕೆ

July 10, 2018

ಮೈಸೂರು:  ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಗುರುತಿಸಲ್ಪಟ್ಟ ಸ್ಥಳದಲ್ಲಿಯೇ `ಫಿಲ್ಮ್ ಸಿಟಿ’ ನಿರ್ಮಾಣ ಮಾಡಬೇಕು. ರಾಜಕೀಯ ಪ್ರಭಾವದಿಂದ ರಾಮನಗರಕ್ಕೆ ಸ್ಥಳಾಂತರ ಮಾಡಲು ಮುಂದಾದರೆ ಚಲನಚಿತ್ರ ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್ ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರನಗರಿಗೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ 114 ಎಕರೆ ಜಾಗವನ್ನು ಗುರುತಿಸಿ ಬಜೆಟ್‍ನಲ್ಲಿ 70 ಕೋಟಿ ಮೀಸಲಿಟ್ಟಿದ್ದರು. ಆದರೆ ಇದೀಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಫಿಲ್ಮ್ ಸಿಟಿಯನ್ನು ರಾಮನಗರದಲ್ಲಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಇದು ಮೈಸೂರಿನ ಜನತೆಗೆ ದ್ರೋಹ ಬಗೆದಂತಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಫಿಲ್ಮ್‍ಸಿಟಿ ಸ್ಥಾಪನೆಗೆ ಎಲ್ಲಾ ಶಾಸಕರು ಒತ್ತಡ ಉಂಟು ಮಾಡಬೇಕೆಂದು ಅವರು ಮನವಿ ಮಾಡಿದರು.

ಕನ್ನಡ ಚಲನಚಿತ್ರ ರಂಗಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ವರನಟ ಡಾ.ರಾಜ್‍ಕುಮಾರ್, ಸಾಹಸಸಿಂಹ ಡಾ.ವಿಷ್ಟುವರ್ಧನ್ ಸೇರಿದಂತೆ ಪ್ರಸ್ತುತ ಮುಂಚೂಣಿಯಲ್ಲಿರುವ ನಟರು, ಸಂಗೀತ ನಿರ್ದೇಶಕರು, ನಿರ್ದೇಶಕರು, ಸ್ಟಂಟ್ ಮಾಸ್ಟರ್‍ಗಳು, ಸಹ ಕಲಾವಿದರು ಸೇರಿದಂತೆ ಚಲನಚಿತ್ರ ರಂಗದ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡುತ್ತಿರುವವರಲ್ಲಿ ಮೈಸೂರಿಗರ ಸಂಖ್ಯೆ ಹೆಚ್ಚಾಗಿದೆ. ಕಲೆಗಳ ತವರೂರಾದ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತವಾಗಿದೆ. ಬಹುತೇಕ ಎಲ್ಲಾ ಚಲನಚಿತ್ರದ ಚಿತ್ರೀಕರಣವು ಮೈಸೂರಿನ ಸುತ್ತಮುತ್ತಲಿರುವ ಸ್ಥಳದಲ್ಲಿಯೇ ನಡೆಯುತ್ತದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಮುಂದಾದರೆ ಟ್ರಾಫಿಕ್ ಜಾಮ್ ಉಂಟಾಗಿ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ಪ್ರವಾಸಿ ತಾಣವನ್ನು ಒಳಗೊಂಡಿರುವ ಮೈಸೂರು ಜಿಲ್ಲೆಯಲ್ಲಿ ಚಿತ್ರೀಕರಣಕ್ಕೆ ಸೂಕ್ತವಾದ ಹಲವಾರು ತಾಣಗಳಿವೆ.

ಇದನ್ನು ಮನಗಂಡು ಉದ್ದೇಶಿತ ಹಿಮ್ಮಾವು ಬಳಿಯೇ ಫಿಲ್ಮ್‍ಸಿಟಿ ನಿರ್ಮಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೈಸೂರಿನಲ್ಲಿರುವ ಎಲ್ಲಾ ಕಲಾವಿದರು ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಮಹೇಶ್ ತಲಕಾಡು, ಅಶೋಕ್, ಪ್ರದೀಪ್‍ಕುಮಾರ್, ಹರೀಶ್ ಕುಮಾರ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರತಿ, ನಿಂಗಪ್ಪ ಸೇರಿದಂತೆ ಇನ್ನಿತರರು ಇದ್ದರು.

Translate »