ಜು.14ರಂದು ಮೈಸೂರು ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್
ಮೈಸೂರು

ಜು.14ರಂದು ಮೈಸೂರು ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್

July 10, 2018
  • ರಾಜೀ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಇದೊಂದು ಸದವಕಾಶ

ಮೈಸೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಜು.14ರಂದು ಮೈಸೂರು ಮತ್ತು ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸುರೇಶ್ ಕೆ. ವಂಟಿಗೋಡಿ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕ ಅದಾಲತ್‍ನಲ್ಲಿ ರಾಜೀಯಾಗಬಲ್ಲ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜಿಗಾಗಿ ಮೈಸೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ 2456 ಬಾಕಿ ಇರುವ ಪ್ರಕರಣಗಳು ಮತ್ತು 929 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ತೆಗೆದುಕೊಳ್ಳಲಾಗಿದೆ. ಅಲ್ಲದೆ ರಾಜೀಯಾಗುವಂತಹ ಇತರೆ ಪ್ರಕರಣಗಳನ್ನು ವಿನಂತಿಯ ಮೇರೆಗೆ ಸಂಬಂಧಪಟ್ಟ ನ್ಯಾಯಾಲಯಗಳನ್ನಾಗಲೀ, ಜಿಲ್ಲಾ ಪ್ರಾಧಿಕಾರ ಅಥವಾ ತಾಲೂಕು ಸಮಿತಿಗಳಲ್ಲಾಗಲೀ ಸಂಪರ್ಕಿಸಿ ಅರ್ಜಿ ಸಲ್ಲಿಸಿದರೆ ಅಂತಹ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಯಾರಿಗಾದರೂ ಯಾವುದೇ ರೀತಿಯ ಕಾನೂನು ತೊಂದರೆ ಇದ್ದರೆ ಮತ್ತು ನೆರವಿನ ಅಗತ್ಯತೆ ಇದ್ದರೆ, ಜಿಲ್ಲಾ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ ಎಂದರು.

ಹಿಂದಿನ 2 ಲೋಕ ಅದಾಲತ್‍ನಲ್ಲಿ 2000 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿದ್ದೇವೆ. ಈ ಬಾರಿಯೂ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳ ರಾಜೀ ಸಾಧ್ಯತೆಗಳಿವೆ. ಇಲ್ಲಿ ಪ್ರಕರಣ ರಾಜೀ ಮೂಲಕ ಇತ್ಯರ್ಥವಾದರೆ ಮತ್ತೆ ಅಪೀಲು ಹೋಗಲು ಅವಕಾಶ ಇರುವುದಿಲ್ಲ ಎಂದರು.

ಮೈಸೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಸೇರಿದಂತೆ ಒಟ್ಟು 99450 ಪ್ರಕರಣಗಳಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ 7 ವರ್ಷಕ್ಕಿಂತ ಹೆಚ್ಚು ಹಾಗೂ ಜೀವಾವಧಿ ಶಿಕ್ಷೆಯಂತಹ ಪ್ರಕರಣಗಳು ರಾಜೀ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಜಿಲ್ಲೆಯಲ್ಲಿ 20,000 ಚೆಕ್ ಬೌನ್ಸ್ ಪ್ರಕರಣ: ಜಿಲ್ಲೆಯಲ್ಲಿ 20,000 ಚೆಕ್ ಬೌನ್ಸ್ ಪ್ರಕರಣಗಳಿದ್ದು, ಈ ಪೈಕಿ ಮೈಸೂರು ತಾಲೂಕಿನಲ್ಲೇ 15,000 ಪ್ರಕರಣಗಳಿವೆ ಎಂದ ಅವರು, ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕಂಪನಿ ಪ್ರಕರಣಗಳು ಕಡಿಮೆ ಇದ್ದು, ವೈಯಕ್ತಿಕ ಪ್ರಕರಣಗಳೇ ಹೆಚ್ಚಾಗಿವೆ. ಚೆಕ್ ಬೌನ್ಸ್ ಪ್ರಕರಣಗಳಲ್ಲಿ ರಾಜಿಯಾದರೆ ನಿಜಾಂಶ ಏನಿರುತ್ತದೆಯೋ ಗಣನೆಗೆ ತೆಗೆದುಕೊಂಡು ಇಬ್ಬರಿಗೂ ನ್ಯಾಯ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು ನ್ಯಾಯಾಲಯ ಆವರಣದಲ್ಲಿರುವ ವೀಡಿಯೋ ಕಾನ್ಫರೆನ್ಸಿಂಗ್ ಹಾಲ್‍ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ಮೊಹಮ್ಮದ್ ಮುಜೀರುಲ್ಲಾ ಉಪಸ್ಥಿತರಿದ್ದರು.

ಖಾಲಿ ಚೆಕ್ ನೀಡಬೇಡಿ: ಜನರಿಗೆ ನ್ಯಾಯಾಧೀಶರ ಸಲಹೆ

ಸಾಲ ಪಡೆದುಕೊಳ್ಳುವಾಗ ಖಾಲಿ ಚೆಕ್ ಕೊಡುವ ಅಭ್ಯಾಸ ಜನರಲ್ಲಿರುವ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಧೀಶರು, ಸಾಲ ಪಡೆದುಕೊಳ್ಳುವಾಗ ಖಾಲಿ ಚೆಕ್‍ಗಳನ್ನು ನೀಡುವುದನ್ನು ಜನರು ಬಿಡಬೇಕು. ನೀವು ಎಷ್ಟು ಹಣ ಪಡೆಯುತ್ತೀರಿ ಅಷ್ಟನ್ನು ಮಾತ್ರ ಮಾತ್ರ ಚೆಕ್‍ನಲ್ಲಿ ನಮೂದಿಸಿ ಕೊಡಿ. ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇದೆ ಎಂದು ಸಲಹೆ ನೀಡಿದರು.

Translate »