ಹುಣಸೂರು ಮಹಾನ್ ಸಾಧಕರ ತವರೂರು ಸಾಹಿತಿ ಬನ್ನೂರು ರಾಜು ಅಭಿಮತ
ಮೈಸೂರು

ಹುಣಸೂರು ಮಹಾನ್ ಸಾಧಕರ ತವರೂರು ಸಾಹಿತಿ ಬನ್ನೂರು ರಾಜು ಅಭಿಮತ

July 10, 2018

ಮೈಸೂರು:  ಕರ್ನಾಟಕದ ಇತಿಹಾಸದಲ್ಲಿ ಹಲವಾರು ಚಾರಿತ್ರಿಕ ದಾಖಲೆಗಳನ್ನು ನಿರ್ಮಿಸಿರುವ ಅನೇಕ ಸಾಧಕರನ್ನು, ಸಾಹಿತಿಗಳನ್ನು, ಪ್ರತಿಭಾ ಸಂಪನ್ನರನ್ನು, ದೈತ್ಯ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ವಿಶಿಷ್ಟ ನೆಲ, ಮಹಾನ್ ಸಾಧಕರ ತವರೂರು ಹುಣಸೂರು ಎಂದು ಸಾಹಿತಿ ಬನ್ನೂರು ಕೆ.ರಾಜು ಹುಣಸೂರಿನ ಮಹತ್ವದ ಬಗ್ಗೆ ತಿಳಿಸಿದರು.

ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಆಶ್ರಯದಲ್ಲಿ ಹುಣಸೂರಿನ ರಂಗನಾಥ ಬಡಾವಣೆ (ಕಲ್ಕುಣ ಕೆ)ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನ ಮುಖ್ಯಮಂತ್ರಿಯಾಗಿ ಕರ್ನಾಟಕಕ್ಕೆ ಮುನ್ನುಡಿ ಬರೆದ ರಾಜಕೀಯ ಮುತ್ಸದ್ಧಿ ಡಿ. ದೇವರಾಜ ಅರಸು, ಕನ್ನಡ ಸಿನಿಮಾ ಲೋಕದ ಸೀಮಾ ಪುರುಷರಾದ ಹುಣಸೂರು ಕೃಷ್ಣಮೂರ್ತಿ, ಕೆಂಪರಾಜ ಅರಸು, ದ್ವಾರಕೀಶ್, ಸಾಹಿತ್ಯ ಲೋಕದ ಸವ್ಯಸಾಚಿ ಚದುರಂಗ, ಸಂಗೀತ ವಿದುಷಿ ಸುಕನ್ಯಾ ಪ್ರಭಾಕರ್, ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಭಾಗೀರಥಿ ಬಾಯಿ ಕದಂರಂತಹ ಘಟಾನುಘಟಿ ಸಾಧಕರು ಹುಟ್ಟಿ ಬೆಳೆದು, ನಡೆದಾಡಿದ ಮಹತ್ವದ ತಾಣ ಹುಣಸೂರು. ವಿಶೇಷವೆಂದರೆ ಇವರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿತು ಸಾಧನೆಯ ಮೆಟ್ಟಿಲುಗಳನ್ನು ಏರಿದವರಾಗಿದ್ದಾರೆ. ಇಂಥ ಮಹನೀಯರನ್ನು ಮಾದರಿಯಾಗಿಟ್ಟುಕೊಂಡು ಶ್ರದ್ಧೆಯಿಂದ ವಿದ್ಯೆ ಕಲಿತು ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕೆಂದು ಹೇಳಿದರು.

ಗುಣಾತ್ಮಕ ಶಿಕ್ಷಣ ನೀಡುವುದರಲ್ಲಿ ಇಂದು ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಮುಂದಿದ್ದು, ಪ್ರಸ್ತುತ ವರ್ಷ ನಡೆದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಬಂದಿರುವ ಉತ್ತಮ ಫಲಿತಾಂಶ ಇದಕ್ಕೆ ಸಾಕ್ಷಿಯಾಗಿದ್ದು ಬಹಳಷ್ಟು ಸರ್ಕಾರಿ ಶಾಲೆಗಳು ನೂರಕ್ಕೆ ನೂರು ಫಲಿತಾಂಶವನ್ನು ಗಳಿಸಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿವೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸರ್ಕಾರವು ಎಲ್ಲಾ ರೀತಿಯ ಸವಲತ್ತುಗಳನ್ನು ಸಮರ್ಪಕವಾಗಿ ನೀಡುತ್ತಿದ್ದು. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಾಧಕರ ನೆಲೆಯಾಗಿರುವ ಹುಣಸೂರಿಗೆ ಕೀರ್ತಿ ತರಬೇಕೆಂದರು.

ಕಾರ್ಯಕ್ರಮದಲ್ಲಿ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳಾದ ಆರ್.ಎಂ.ರಕ್ಷಿತಾ, ಎನ್.ಆರ್.ಅಶ್ವಿನಿ, ಎನ್.ಎಸ್.ಕೀರ್ತಿನಾ ಹಾಗೂ ಡಿ.ಕುಮಾರನಾಯಕ ಅವರನ್ನು ಪ್ರತಿಷ್ಠಾನದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್. ಗುರುಪ್ರಸಾದ್ ತಮ್ಮ ತಾಯಿ ಯಶೋಧಾ ಅವರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ, ಗೌರವಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಶಿಕ್ಷಣ ತಜ್ಞ ಎ. ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ, ಓರಿಗಾಮಿ ತಜ್ಞ ಹೆಚ್.ವಿ. ಮುರಳೀಧರ್, ವಿಶ್ರಾಂತ ಶಿಕ್ಷಕ, ಚಿಂತಕ ವೆಂಕಟನಾರಾಯಣ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಬೆಳಕು ಚೆಲ್ಲುವಂತಹ ಮಾರ್ಗದರ್ಶನದ ಮಾತುಗಳನ್ನಾಡಿದರು. ಕೊನೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಆರ್. ತಮ್ಮಯ್ಯ ಮಾತನಾಡಿ, ವಿದ್ಯ ಎಂಬುದು ಸಾಧಕರ ಸೊತ್ತೇ ಹೊರತು ಸೋಮಾರಿಗಳ ಸೊತ್ತಲ್ಲ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಶ್ರದ್ಧೆ, ಪರಿಶ್ರಮ, ಆತ್ಮವಿಶ್ವಾಸ ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದೆಂದು ಹಿತವಚನ ಹೇಳಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮಹದೇವನಾಯಕ, ಶಿಕ್ಷಕರಾದ ವಿ.ಕೆ.ಪಂಡಿತ್, ಕೆ.ಆರ್.ಕಾಂತರಾಜ್, ಸಿ.ಎಂ.ಶಿವಯ್ಯ, ಎಸ್.ಎಸ್.ಕಲಾ, ಎಂ.ಎನ್.ವೀಣಾ, ಎ.ಎ.ಪೂರ್ಣಿಮಾ, ಲಿಲ್ಲಿ ಬೆನ್ನಿಸ್, ಕೆ.ವಿ.ಲಕ್ಷ್ಮಮ್ಮ ಹಾಗೂ ಎಸ್.ಗುರುಪ್ರಸಾದ್ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿ.ಕೆ.ಪಂಡಿತ್ ಸ್ವಾಗತಿಸಿದರೆ ಕೆ.ಆರ್.ಕಾಂತರಾಜ್ ವಂದಿಸಿದರು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಾಸ್ಕøಂತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Translate »