ಹೂಟಗಳ್ಳಿಯಿಂದ ಕೆಆರ್‌ಎಸ್‌  ರಸ್ತೆವರೆಗಿನ  ರಸ್ತೆ ಕಾಮಗಾರಿ ಬಗ್ಗೆ ಗ್ರಾಮಸ್ಥರ ಆಕ್ಷೇಪ
ಮೈಸೂರು

ಹೂಟಗಳ್ಳಿಯಿಂದ ಕೆಆರ್‌ಎಸ್‌ ರಸ್ತೆವರೆಗಿನ  ರಸ್ತೆ ಕಾಮಗಾರಿ ಬಗ್ಗೆ ಗ್ರಾಮಸ್ಥರ ಆಕ್ಷೇಪ

July 10, 2018

ಮೈಸೂರು: ಮೈಸೂರಿನ ಹೂಟಗಳ್ಳಿ ಸಿಗ್ನಲ್‍ನಿಂದ ಕೆಆರ್‌ಎಸ್‌ ರಸ್ತೆವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೆತ್ತಿಕೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹೂಟಗಳ್ಳಿ ಸಿಗ್ನಲ್‍ನಿಂದ ಬೆಮೆಲ್‍ಗೇಟ್ ನಡುವೆ 1900 ಮೀ. ನಾಲ್ಕು ಲೇನ್ ಹಾಗೂ ಬಸ್ತಿಪುರ ಮಾರ್ಗವಾಗಿ ಕೆಆರ್‌ಎಸ್‌ ರಸ್ತೆವರೆಗೆ 300 ಮೀ. ಎರಡು ಲೇನ್ ರಸ್ತೆ ಅಭಿವೃದ್ಧಿ, ಚರಂಡಿ, ಫುಟ್‍ಪಾತ್ ನಿರ್ಮಾಣ, ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಸುಮಾರು 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಹೂಟಗಳ್ಳಿ ಸಮೀಪ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕಾಮಗಾರಿ ಸಮರ್ಪಕವಾಗಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತರು, ಹೂಟಗಳ್ಳಿ ಮುಖಂಡರು ಹಾಗೂ ಗ್ರಾಮಸ್ಥರ ಆರೋಪವಾಗಿದೆ.

ಸದ್ಯ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸುವ ಕೆಲಸವನ್ನು ಆರಂಭಿಸಲಾಗಿದೆ. ಸರ್ವೇ ಮಾಡಿಸಿ ಮಧ್ಯಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಜಾಗ ನಿಗಧಿ ಮಾಡಿ, ನಂತರ ಚರಂಡಿ ನಿರ್ಮಿಸಿದರೆ ಒಳಿತು. ಆದರೆ ಯಾವುದೇ ಸರ್ವೇ ಮಾಡಿಸದೆ ಇರುವ ಜಾಗದಲ್ಲಿ ಚರಂಡಿ, ರಸ್ತೆ ನಿರ್ಮಿಸಿದರೆ ಫುಟ್‍ಪಾತ್‍ಗೆ ಸ್ಥಳಾವಕಾಶವೇ ಇರುವುದಿಲ್ಲ. ಈಗ ಬೇಕಾಬಿಟ್ಟಿ ಕಾಮಗಾರಿ ಪೂರೈಸಿದರೆ ಮುಂದೆ ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ನಾನು ರಸ್ತೆ ಅಭಿವೃದ್ಧಿ ಕಾಮಗಾರಿಯ ವಿವರವನ್ನು ಮಾಹಿತಿ ಹಕ್ಕಿನಡಿ ಪಡೆದಿದ್ದೇನೆ. ಯೋಜನಾಬದ್ಧವಾಗಿ ಕಾಮಗಾರಿ ನಡೆಸಬೇಕು. ಸರ್ವೇ ಮಾಡಿಸಿ, ಮಧ್ಯಭಾಗಕ್ಕೆ ಡಾಂಬರು ರಸ್ತೆ ನಿರ್ಮಾಣ ಮಾಡಿ, ನಂತರದಲ್ಲಿ ಚರಂಡಿ ವ್ಯವಸ್ಥೆ ಇರಬೇಕು. ಇಲ್ಲವಾದರೆ ಕಾಮಗಾರಿ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ.

ಈ ನಡುವೆ ಕಾಮಗಾರಿ ನಡೆಸಲು ಮುಂದಾದಾಗ ಗ್ರಾಮಸ್ಥರು ತಡೆದಿದ್ದೇವೆ. ಇದಾಗಿ ಒಂದೆರಡು ದಿನ ಕಳೆದ ನಂತರ ಮತ್ತೆ ಅದೇ ರೀತಿ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗುತ್ತಾರೆ. ಸರ್ವೇ ಮಾಡಿಸಲು ಅಧಿಕಾರಿಗಳು ಯಾಕಿಷ್ಟು ಮೀನಾಮೇಷ ಎಣಿಸುತ್ತಿದ್ದಾರೋ ಗೊತ್ತಿಲ್ಲ. ನಿಮಗೇನಾದರೂ ರಾಜಕಾರಣಿಗಳು, ಪ್ರಭಾವಿಗಳ ಒತ್ತಡವಿದೆಯೇ? ಎಂದು ನಾವು ಅಧಿಕಾರಿಗಳನ್ನು ನೇರವಾಗಿಯೇ ಪ್ರಶ್ನಿಸಿದ್ದೇವೆ. ಕಾಮಗಾರಿ ನಡೆಸುವಾಗಲೇ ಸಮರ್ಪಕವಾಗಿದ್ದರೆ ಮುಂದೆ ಸಮಸ್ಯೆಗಳಿರುವುದಿಲ್ಲ. ಏನೇ ಆದರೂ ಸರ್ವೇ ಮಾಡಿಸಿ, ನಂತರ ಯೋಜನಾಬದ್ಧವಾಗಿ ಸಮರ್ಪಕ ಕಾಮಗಾರಿ ನಡೆಸದಿದ್ದರೆ ನಾವು ಉಗ್ರವಾದ ಹೋರಾಟ ನಡೆಸುತ್ತೇವೆಂದು ಹೂಟಗಳ್ಳಿ ನಿವಾಸಿ, ಆರ್‍ಟಿಐ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಜು, 1900 ಮೀ. ಫೋರ್‍ಲೇನ್ ಹಾಗೂ 300 ಮೀ. ಟು ಲೇನ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 5 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಸರ್ವೇಯರ್ ಕಾರ್ಯಾರಂಭ ಮಾಡಿದ್ದಾರೆ. ಹಂತ ಹಂತವಾಗಿ ಕಾಮಗಾರಿ ನಡೆಸಬೇಕಿದ್ದು, ಈಗ ಚರಂಡಿ, ರಸ್ತೆ ಕಾಮಗಾರಿ ಮುಂದುವರಿಸುತ್ತೇವೆ. ಕಂದಾಯ ಇಲಾಖೆ ಕ್ರಮದ ನಂತರ ಫುಟ್‍ಪಾತ್ ಕಾಮಗಾರಿ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಯಾವ ಇಲಾಖೆಯಿಂದ ಕಾಮಗಾರಿ ನಡೆಸಿದರೂ ಅದಕ್ಕೆ ಭರಿಸುವುದು ಸಾರ್ವಜನಿಕರ ತೆರಿಗೆ ಹಣದಿಂದ. ಕಾಮಗಾರಿ ಯೋಜನಾಬದ್ಧವಾಗಿ ನಡೆದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕಾಮಗಾರಿಗೆ ಮುನ್ನವೇ ತೆರವುಗೊಳಿಸುವುದು ಸೂಕ್ತ. ಯಾರದೋ ಒತ್ತಡಕ್ಕೆ ಮಣಿದು, ಕೆಲವರ ರಕ್ಷಣೆಗಾಗಿ ಸಾರ್ವಜನಿಕರ ಹಿತವನ್ನು ಬಲಿಕೊಡಬಾರದು. ಕೋಟ್ಯಾಂತರ ರೂ. ಹಣ ಸುರಿದು ರಸ್ತೆ ಮಾಡಿ, ಒತ್ತುವರಿ ನಂತರ ಮತ್ತೆ ಮಾರ್ಪಾಡು ಮಾಡುವ ಕೆಲಸವಾಗಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »