ಹೂಟಗಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಮೈಸೂರು

ಹೂಟಗಳ್ಳಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

June 12, 2019

ಮೈಸೂರು: ಗುಂಪೊಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮೈಸೂರಿನ ಹೂಟಗಳ್ಳಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಹೂಟಗಳ್ಳಿ ನಿವಾಸಿ ಶಿವು ತೀವ್ರವಾಗಿ ಗಾಯಗೊಂಡಿರುವ ಯುವಕ ನಾಗಿದ್ದು, ಆತನನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಮವಾರ ರಾತ್ರಿ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಬಳಿ ಸರ್ಕಲ್‍ನಲ್ಲಿ ಕುಳಿತಿದ್ದಾಗ ಏಕಾಏಕಿ ನಾಲ್ವರು ಯುವಕರ ಗುಂಪು ದಾಳಿ ನಡೆಸಿ ಮಚ್ಚು, ಡ್ರ್ಯಾಗನ್‍ನಿಂದ ಹಲ್ಲೆ ನಡೆಸಿ ಪರಾರಿಯಾಯಿತು ಎಂದು ಶಿವು ಪೊಲೀಸರಿಗೆ ತಿಳಿಸಿದ್ದಾನೆ.

ಘಟನೆಯಲ್ಲಿ ಶಿವು ಕೊರಳಲ್ಲಿದ್ದ 23 ಗ್ರಾಂ ಚಿನ್ನದ ಸರ ನಾಪತ್ತೆಯಾಗಿದ್ದು, ಹಲ್ಲೆ ನಡೆಸಿದವರೇ ಕಿತ್ತುಕೊಂಡಿದ್ದಾರೆಂದು ಆತ ದೂರಿನಲ್ಲಿ ಆರೋಪಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಠಾಣೆ ಪ್ರಭಾರ ಇನ್‍ಸ್ಪೆಕ್ಟರ್ ಸುರೇಶ್‍ಕುಮಾರ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಚಿನ್ನದ ಸರಕ್ಕಾಗಿ ಬಂದವರು ಹಲ್ಲೆ ನಡೆಸಿದರು ಎಂದು ಶಿವು ಹೇಳಿದ್ದರಾದರೂ, ಘಟನೆ ಹಿಂದೆ ಬೇರೆ ಕಾರಣವಿರಬಹುದೆಂದು ಶಂಕಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »