ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 12 ಸಾವಿರ ಸಹಾಯ ಧನಕ್ಕೆ ಆಗ್ರಹ
ಮೈಸೂರು

ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 12 ಸಾವಿರ ಸಹಾಯ ಧನಕ್ಕೆ ಆಗ್ರಹ

June 12, 2019

ಮೈಸೂರು:ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ 6 ಸಾವಿರ ರೂ. ಸಹಾಯಧನ ವನ್ನು 12 ಸಾವಿರ ರೂ.ಗೆ ಹೆಚ್ಚಳ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಯೋಜನ ಯಾವುದೇ ಆದಾಯ ಮಿತಿ ಇಲ್ಲದೆ ಎಲ್ಲಾ ರೈತರಿಗೂ ದೊರೆಯುವಂತೆ ಆಗಬೇಕು ಎಂದರು. ಕೇಂದ್ರ ಸರ್ಕಾರ ಇಂದು ಬಜೆಟ್ ಪೂರ್ವ ಚರ್ಚೆ ಏರ್ಪಡಿ ಸಿದ್ದು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ರೈತ ಮುಖಂಡರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಹ್ವಾನಿಸಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯ ವಾರ್ಷಿಕ ಸಹಾಯಧನ ವನ್ನು 12 ಸಾವಿರ ರೂ.ಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. 2019-20ನೇ ಸಾಲಿಗೆ ಎಫ್‍ಆರ್‍ಪಿ ದರವನ್ನು ಕನಿಷ್ಠ 3 ಸಾವಿರ ರೂ.ಗೆ ನಿಗದಿ ಮಾಡಬೇಕು. ರಾಜ್ಯ ಸರ್ಕಾರ ರೈತರಿಗೆ ಅನ್ಯಾಯವಾಗುವಂತೆ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿದೆ. ರೈತರ ಅನುಮತಿ ಇಲ್ಲದೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಈ ತಿದ್ದುಪಡಿ ಕಾಯ್ದೆ ಯಲ್ಲಿ ಅವಕಾಶ ಮಾಡಿಕೊಟ್ಟಿರುವುದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ. ರಾಜ್ಯ ಸರ್ಕಾರ ಭೂ ಮಾಫಿಯಾ ಒತ್ತಡಕ್ಕೆ ಮಣಿದು ಈ ರೀತಿಯ ತಿದ್ದುಪಡಿ ತಂದಿದ್ದು, ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಗುಂಡ್ಲುಪೇಟೆ ತಾಲೂಕಿನ ಬಡೆಗೆರೆ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಈ ಕೂಡಲೇ ಕಾರ್ಯಾರಂಭ ಮಾಡಬೇಕು. ಇಲ್ಲವಾದರೆ ಜೂ.16 ರಂದು ರಾಜ್ಯ ರೈತ ಸಂಘ ನಡೆಸುವ ಹೋರಾಟಕ್ಕೆ ಬೆಂಬಲ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆ ಮುಖಂಡರಾದ ಅತ್ತಹಳ್ಳಿ ದೇವರಾಜ್, ಎಂ.ಬಿ.ಚೇತನ್, ವೆಂಕಟೇಶ್, ಭುಜಂಗಪ್ಪ, ಜವರಯ್ಯ ಗೋಷ್ಠಿಯಲ್ಲಿದ್ದರು.

Translate »