ಮೈಸೂರಲ್ಲಿ 35ಕ್ಕೂ ಹೆಚ್ಚು ಟಾಂಗಾ ಕುದುರೆಗಳ ಆರೋಗ್ಯ ತಪಾಸಣೆ
ಮೈಸೂರು

ಮೈಸೂರಲ್ಲಿ 35ಕ್ಕೂ ಹೆಚ್ಚು ಟಾಂಗಾ ಕುದುರೆಗಳ ಆರೋಗ್ಯ ತಪಾಸಣೆ

June 12, 2019

ಮೈಸೂರು: ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ), ವಲ್ರ್ಡ್ ವೆಟ್ ಇಂಟರ್‍ನ್ಯಾಷನಲ್ ಸೊಸೈಟಿ (ಡಬ್ಲ್ಯೂ ವಿಎಸ್) ವತಿಯಿಂದ ಸೋಮವಾರ ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ಟಾಂಗಾ ಕುದುರೆಗಳ ಆರೋಗ್ಯ ತಪಾಸಣಾ ಶಿಬಿರದ ವೇಳೆ ಬಹುತೇಕ ಕುದುರೆಗಳ ಆರೋಗ್ಯದಲ್ಲಿ ಏರುಪೇರು ಇರುವುದು ಹೆಚ್ಚಾಗಿ ಕಂಡು ಬಂದಿತು.

ಶಿಬಿರದಲ್ಲಿ ಪೀಪಲ್ ಫಾರ್ ಅನಿಮಲ್ ಮತ್ತು ವಲ್ರ್ಡ್ ವೆಟ್ ಇಂಟರ್‍ನ್ಯಾಷನಲ್‍ನ ನುರಿತ ಪಶು ವೈದ್ಯರು 35ಕ್ಕೂ ಹೆಚ್ಚು ಕುದುರೆಗಳ ಆರೋಗ್ಯ ಪರೀಕ್ಷಿಸಿದರು. ಈ ವೇಳೆ ಕೆಲವು ಕುದುರೆಗಳು ಗಾಯಗೊಂಡಿದ್ದು, ಓಡಲಾಗದೆ ಕುಂಟುತ್ತಿದ್ದವು. ಆದರೆ ಟಾಂಗಾ ಮಾಲೀಕರು ಅವುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸದೇ ದುಡಿಸಿಕೊಳ್ಳುತ್ತಿದ್ದದ್ದು ಕಂಡು ಬಂದಿತು.

ಪಿಎಫ್‍ಎ ಪಶು ವೈದ್ಯರಾದ ಡಾ.ಅಮರ್‍ದೀಪ್‍ಸಿಂಗ್, ಮೋಹನ್‍ರಾವ್, ವಲ್ರ್ಡ್‍ವೆಟ್ ಇಂಟರ್‍ನ್ಯಾಷನಲ್ ಸೊಸೈ ಟಿಯ ವೈದ್ಯರಾದ ಡಾ.ಎನ್.ಬಾಲಾಜಿ, ಡಾ.ಅಕ್ಷಯ್‍ಮೋಹನ್, ಡಾ.ವಿ.ಆರ್. ಅಮೂಲ್ಯ ಇನ್ನಿತರರು ಕುದುರೆಗಳ ಬಾಯಿ, ಹಲ್ಲು, ಹೊಟ್ಟೆ, ಕಾಲು ಇನ್ನಿತರೆ ಪರೀಕ್ಷೆಗಳನ್ನು ನಡೆಸಿ ಅವುಗಳ ಕಾಯಿಲೆಗೆ ತಕ್ಕ ಔಷಧಿಗಳನ್ನು ವಿತರಿಸಿದರು.

ಜೊತೆಗೆ ಪೌಷ್ಟಿಕಾಂಶವುಳ್ಳ ಔಷಧಿಗಳನ್ನು ನೀಡಿದರು. ಇಂಡಿಯನ್ ವೈಲ್ಡ್‍ಲೈಫ್ ಎಕ್ಸ್‍ಪ್ಲೋರರ್, ಜೈನ್ ಚಾರಿಟಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಮಾಜ ಸೇವಾ ಸಂಘಟನೆಗಳು ಸಹ ಶಿಬಿರಕ್ಕೆ ಸಹಯೋಗ ನೀಡಿದ್ದವು.

ಅಲ್ಲದೆ ಮೈಸೂರಿನ ಅಗ್ರಹಾರ, ಸಯ್ಯಾಜಿರಾವ್ ರಸ್ತೆ, ಗ್ರಾಮಾಂತರ ಬಸ್ ನಿಲ್ದಾಣ, ಕುಕ್ಕರಹಳ್ಳಿ ಕೆರೆ ಬಳಿ ಇರುವ ಟಾಂಗಾ ಕುದುರೆ ನಿಲ್ದಾಣಗಳಿರುವ ಕಡೆ ವೈದ್ಯರೇ ಹೋಗಿ ಕುದುರೆ ಗಳ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಎಎನ್‍ಐ ಫೌಂಡೇಷನ್‍ನ ವೈದ್ಯರು ಕುದುರೆಗಳ ಮಾಲೀಕರ ಕುಟುಂಬದವರಿಗೂ ಉಚಿತವಾಗಿ ದಂತ ಪರೀಕ್ಷೆ ನಡೆಸಿದರು. ದಂತ ವೈದ್ಯರಾದ ಡಾ.ನಿಸರ್ಗ ಕನೂರ್, ಡಾ.ಅನುಶ್ರೀ ಪರೀಕ್ಷೆ ನಡೆಸಿ, ಉಚಿತ ಔಷಧಿಗಳನ್ನು ನೀಡಿದರು.

ನಾಳೆಯೂ (ಜೂ.12) ಟಾಂಗಾ ನಿಲ್ದಾಣಗಳಲ್ಲಿ ಕುದುರೆಗಳ ಆರೋಗ್ಯ ತಪಾಸಣೆ ನಡೆಸಲಾಗುವುದು. ಜೂ.13ರಂದು ಶ್ರೀರಂಗ ಪಟ್ಟಣದಲ್ಲೂ ಟಾಂಗಾ ಕುದುರೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಸಂಯೋಜಕಿ ಕೆ.ಭಾಗ್ಯಲಕ್ಷ್ಮಿ ತಿಳಿಸಿದರು. ಈ ಸಂದರ್ಭ ದಲ್ಲಿ ಮೈಸೂರಿನ ಪಿಎಫ್‍ಎ ಅಧ್ಯಕ್ಷೆ ಸವಿತಾ ನಾಗಭೂಷಣ್, ಸಂಯೋಜಕಿ ಕೆ.ಭಾಗ್ಯಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.

Translate »