ಶ್ರೀರಾಂಪುರ ನಿವಾಸಿಗಳ ಭಯ ಇನ್ನೂ ಹೋಗಿಲ್ಲ ರಿಂಗ್ ರಸ್ತೆ ಬಳಿ ದೊಡ್ಡ ಚರಂಡಿ ಒತ್ತುವರಿ
ಮೈಸೂರು

ಶ್ರೀರಾಂಪುರ ನಿವಾಸಿಗಳ ಭಯ ಇನ್ನೂ ಹೋಗಿಲ್ಲ ರಿಂಗ್ ರಸ್ತೆ ಬಳಿ ದೊಡ್ಡ ಚರಂಡಿ ಒತ್ತುವರಿ

June 12, 2019

ಮೈಸೂರು: ಎರಡು ವರ್ಷಗಳ ಹಿಂದೆ ಜಲಪ್ರಳಯ ದಿಂದಾಗಿ ನಲುಗಿದ್ದ ಮೈಸೂರಿನ ಶ್ರೀರಾಂ ಪುರ ಬಡಾವಣೆಯ ನಿವಾಸಿಗಳಿಗೆ ಇನ್ನೂ ಭಯ ಹೋಗಿಲ್ಲ. ಆಗಸದಲ್ಲಿ ಭಾರೀ ಮೋಡ ಕಂಡರೆ ಈಗಲೂ ಭಯ ಕಾಡುತ್ತಿದೆ. ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಬಿದ್ದ ಸಾಮಾನ್ಯ ಮಳೆಗೆ ಶ್ರೀರಾಂಪುರ 2ನೇ ಹಂತದ ಶ್ರೀರಾಂಪುರ ಮಧ್ಯೆ ಹಾದು ಹೋಗಿರುವ ದೊಡ್ಡ ಮೋರಿ ಮುಕ್ಕಾಲು ಭಾಗ ತುಂಬಿ ಭಾರೀ ಸದ್ದಿ ನೊಂದಿಗೆ ನೀರು ನುಗ್ಗಿತ್ತು. ಭಾರೀ ಸದ್ದು ಕೇಳಿ ಬೆಚ್ಚಿ ಬಿದ್ದ ಜನ ಹೊರ ಬಂದು ಮೋರಿಯಲ್ಲಿ ರಭಸವಾಗಿ ಹರಿಯುತ್ತಿದ್ದ ಭಾರೀ ನೀರು ಕಂಡು ಎರಡು ವರ್ಷದ ಹಿಂದಿನ ಘಟನೆಯನ್ನು ನೆನೆಸಿಕೊಳ್ಳುವಂತೆ ಮಾಡಿತ್ತು.

ಅಂದು ಮುಡಾ ಅಧ್ಯಕ್ಷರಾಗಿದ್ದ ಡಿ.ಧ್ರುವಕುಮಾರ್, ಕೃಷ್ಣರಾಜ ಕ್ಷೇತ್ರದ ಶಾಸಕರಾಗಿದ್ದ ಎಂ.ಕೆ.ಸೋಮಶೇಖರ್ ಇನ್ನಿತರರು ಸ್ಥಳಕ್ಕೆ ಆಗಮಿಸಿ ದೊಡ್ಡ ಮೋರಿ ಯನ್ನು ಒಂದೆರಡು ಅಡಿ ಎತ್ತರಿಸಿ, ನೀರು ಸರಾಗವಾಗಿ ಮುಂದೆ ಹೋಗಲು ಅನುಕೂಲವಾಗುವಂತೆ ಸೇತುವೆಯನ್ನು ನಿರ್ಮಿಸಿದ್ದರು. ಆದರೆ ಆ ಕಾಮಗಾರಿ ಕೇವಲ ಸೇತುವೆಯಷ್ಟಕ್ಕೇ ನಿಂತು ಹೋಯಿತು.

ಇಂದಿಗೂ ಭಾರೀ ಮಳೆ ಬಂದರೆ ದೊಡ್ಡ ಮೋರಿಯಲ್ಲಿ ಹರಿದು ಬರುವ ನೀರು ಸೇತುವೆಯಿಂದ ಮುಂದಕ್ಕೆ ಹೋಗಲಾಗದೆ ಮತ್ತೇ ವಾಪಸ್ ಬರುತ್ತಿದೆ. ಇದು ನಿವಾಸಿಗಳ ಚಿಂತೆಗೆ ಕಾರಣವಾಗಿದೆ.

ಮಾನಂದವಾಡಿ ಸೇತುವೆಯಿಂದ ಮುಂದಕ್ಕೆ ದೊಡ್ಡ ಮೋರಿ ನಿರ್ಮಿಸಿಲ್ಲ ದಿರುವುದೇ ನಿವಾಸಿಗಳ ಆತಂಕಕ್ಕೆ ಕಾರಣ ವಾಗಿದೆ. ಅಂದು ಕಾಮಗಾರಿ ಕೈಗೊಳ್ಳು ವಾಗ ಒಂದಷ್ಟು ಮಣ್ಣು ತೆಗೆದು ಹಾಗೆಯೇ ಕೈಬಿಡಲಾಗಿತ್ತು. ಹೀಗಾಗಿ ಇದೀಗ ಅಲ್ಲಿ ಎತ್ತರದ ಹೂಳು ತುಂಬಿದ್ದು, ಸರಾಗವಾಗಿ ಹರಿದು ಹೋಗಬೇಕಾದ ನೀರು ಅಲ್ಲಿ ತಡೆಯೊಡ್ಡಲ್ಪಟ್ಟು ಮತ್ತೆ ವಾಪ ಸಾಗುತ್ತಿದೆ. ಅಷ್ಟೇ ಅಲ್ಲದೆ, ಅಲ್ಲಿಂದ ಮುಂದಕ್ಕೆ ನೀರು ಹೋಗಲು ಸಣ್ಣ ಮೋರಿ ಇದೆ. ಇದು ಶ್ರೀರಾಂಪುರ ರಿಂಗ್‍ರಸ್ತೆ ಕಡೆಗೆ ಸಣ್ಣ ಮೋರಿಯಲ್ಲಿ ಸರಾಗವಾಗಿ ಹರಿಯಲಾಗದು. ಏಕೆಂದರೆ ಅಲ್ಲಿ ದೊಡ್ಡದಾಗಿದ್ದ ಚರಂಡಿ ಅಕ್ಕಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಶ್ರೀರಾಂಪುರ ಬಡಾವಣೆಯ ಜನರಿಗೆ ಇದೀಗ ಮತ್ತೇ ಆತಂಕ ಶುರುವಾಗಿದೆ. ಮೋಡ ಕಂಡರೆ ಭಯ ಬೀಳುವಂತಾಗಿದೆ.

Translate »