ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ
ಮೈಸೂರು

ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ

July 5, 2018

ಮೈಸೂರು: ಅಪರಿಚಿತ ಆಟೋ ಚಾಲಕನೊಬ್ಬ, ಪ್ರಯಾಣಿಕರೊಬ್ಬರಿಂದ ಹೆಚ್ಚಿನ ಹಣ ಕೀಳಲು ಯತ್ನಿಸಿ, ಕೊಡದೇ ಇದ್ದಾಗ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಆರ್‍ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ನಡೆದಿದೆ.
ಮೇಟಗಳ್ಳಿ ನಿವಾಸಿ ಸದಾನಂದ ಜೇವೂರ ಸುಲಿಗೆಗೊಳಗಾದ ಪ್ರಯಾಣಿಕ. ಮಂಗಳವಾರ ರಾತ್ರಿ 11.45ರ ವೇಳೆಗೆ ಮೇಟಗಳ್ಳಿಯ ತಮ್ಮ ನಿವಾಸಕ್ಕೆ ಹೋಗಲು ಬಸ್ ಸಿಗದ ಹಿನ್ನೆಲೆಯಲ್ಲಿ ಆಟೋರಿಕ್ಷಾದಲ್ಲಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ಆಟೋ ಚಾಲಕ, ಜೇವೂರ ಅವರನ್ನು ಮೇಟಗಳ್ಳಿ ಕರೆದುಕೊಂಡು ಹೋಗಲು ನಿಗದಿತ ದರಕ್ಕಿಂತ ಮೂರು ಪಟ್ಟು(300ರೂ.) ಹಣ ಕೇಳಿದ್ದಾನೆ.

ಅದಕ್ಕೆ ಜೇವೂರ ಒಪ್ಪದಿದ್ದಾಗ ಅವರನ್ನು ಸ್ವಲ್ಪ ದೂರ ಆಟೋದಲ್ಲಿ ಕೂರಿಸಿಕೊಂಡು ಹೋಗಿ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »