ಮೈಸೂರು, ಜೂ.13-ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಮಾತ್ರವೇ ದೂರ ಶಿಕ್ಷಣ ನೀಡ ಬೇಕೆಂದು ರಾಜ್ಯ ಸರ್ಕಾರ ಕೈಗೊಂ ಡಿರುವ ತೀರ್ಮಾನವನ್ನು ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ.
ಈ ಕುರಿತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಯುಜಿಸಿ ಮಾನ್ಯತೆ ರದ್ದಾದ ಮೇಲೆ ತೊಂದರೆಗೀಡಾದ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಪ್ರಯತ್ನದಲ್ಲಿದ್ದೇವೆ ಎಂದಿದ್ದಾರೆ.
ಪರಿಷತ್ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ತಾವು ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೇಳುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿ ಸಿದ ಅವರು, ಕ್ಷೇತ್ರದ ಕೆಲಸ ಮಾಡುವುದಕ್ಕಾಗಿ ಮೈಸೂರು ಮತ್ತು ಕೊಡಗು ಜನರು ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ನಾನು ಜನರ ಕೆಲಸ ಮಾಡುತ್ತಿದ್ದೇನೆ. ವಿಧಾನ ಪರಿಷತ್ ಚುನಾವಣೆಗೆ ಯಾರಿಗಾದರೂ ಟಿಕೆಟ್ ಕೇಳುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅದೇನಿದ್ದರೂ ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ ಎಂದು ಹೇಳಿದರು.