ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ಕೊಡಗು

ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

July 12, 2021

ವಿರಾಜಪೇಟೆ, ಜು.11- ಬಡ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದಿಂದ ನೀಡುತ್ತಿರುವ ದಿನಸಿ ಕಿಟ್‍ಗಳು ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಿದ್ದ ದಿನಸಿ ಕಿಟ್‍ಗಳನ್ನು ವಿರಾಜ ಪೇಟೆ ಪುರಭವನದಲ್ಲಿ ಕಟ್ಟಡ ಹಾಗೂ ಇತರ ಕಾರ್ಮಿಕರಿಗೆ ವಿತರಿಸಿದ ಶಾಸಕ ಬೋಪಯ್ಯ ಮಾತನಾಡಿ, ಕಳೆದ ಒಂದು ವರ್ಷದಿಂದ ಕೋವಿಡ್-19 ಎದುರಿಸಲು ಪ್ರಯತ್ನ ನಡೆಸುತ್ತಿದ್ದು, ಸಂಕಷ್ಟದಲ್ಲಿರುವ ಬಡ ಕಾರ್ಮಿಕ ನಿವಾಸಿಗಳಿಗೆ ಸರ್ಕಾರ ದಿನಸಿ ಕಿಟ್‍ಗಳನ್ನು ನೀಡುತ್ತಿರುವುದು ತುಂಬಾ ಸಹಕಾರ ನೀಡಿದಂತಾಗಿದೆ. ಎಲ್ಲಾ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಈಗಾಗಲೇ ಅನ್‍ಲಾಕ್ ಆಗ್ತಿದ್ದಂತೆ ಜನರು ಮೈಮರೆಯಬಾರದು. ಮತ್ತೆ ಲಾಕ್‍ಡೌನ್ ಅನಿವಾರ್ಯತೆ ಸೃಷ್ಟಿಯಾಗಬಹುದು. ಕಾರ್ಮಿಕರು ಮತ್ತು ಸಾರ್ವಜನಿಕರು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರ ದಿಂದ ಇರಬೇಕು ಎಂದರಲ್ಲದೆ, ಗಡಿಭಾಗ ಕೇರಳ ರಾಜ್ಯದಿಂದ ಬರುವವರ ಬಗ್ಗೆ ಮತ್ತು ಮಂಗಳೂರು ರಸ್ತೆ ಸಂಪಾಜೆಯ ಗೇಟ್‍ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ವಿರಾಜಪೇಟೆ ಹಿರಿಯ ಅಧಿಕಾರಿ ಜಯಣ್ಣ ಮಾತನಾಡಿ, ವಿರಾಜಪೇಟೆ ತಾಲೂ ಕಿನ ಕಟ್ಟಡ ಹಾಗೂ ಇತರ ಕಾರ್ಮಿಕರು ಸೇರಿದಂತೆ ಒಟ್ಟು 2000 ದಿನಸಿ ಕಿಟ್‍ಗಳು ಬಂದಿದ್ದು, ಅದನ್ನು ಸಮರ್ಪಕವಾಗಿ ಕಾರ್ಮಿಕ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಎನ್.ಹೇಮ್‍ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನಾ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 330 ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.

Translate »