ಕೊಡಗು ‘ಅನ್‍ಲಾಕ್’ ಆದರೂ ಪ್ರವಾಸಿತಾಣಗಳಿಗೆ  ‘ಲಾಕ್’
ಕೊಡಗು

ಕೊಡಗು ‘ಅನ್‍ಲಾಕ್’ ಆದರೂ ಪ್ರವಾಸಿತಾಣಗಳಿಗೆ ‘ಲಾಕ್’

July 12, 2021

ಮಡಿಕೇರಿ,ಜು.11-ಕೋವಿಡ್ ಇಳಿಕೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ `ಅನ್‍ಲಾಕ್’ ಆಗಿದೆ. ಜಿಲ್ಲೆಗೆ 3 ತಿಂಗಳ ಬಳಿಕ ಪ್ರವಾಸಿಗರು ತಂಡೋಪತಂಡ ವಾಗಿ ಆಗಮಿಸುತ್ತಿದ್ದು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳ ಗೇಟ್ ಗಳನ್ನು `ಲಾಕ್’ ಮಾಡಿದ್ದು, ಪ್ರವಾಸಿ ಗರಿಗೆ ಗೊಂದಲ ಸೃಷ್ಟಿಯಾಗಿದೆ.

ಪ್ರವಾಸಿಗರಿಗೆ ಕೊಡಗು ಜಿಲ್ಲೆ ಮುಕ್ತ ವಾಗಿದ್ದರೂ ಕೂಡ ಪ್ರವಾಸೋದ್ಯಮ ತಾಣಗಳ ಬಾಗಿಲು ಇನ್ನೂ ತೆರೆಯದ ಹಿನ್ನೆಲೆಯಲ್ಲಿ ಪ್ರವಾಸಿಗರು ಬೀಗ ಹಾಕಿದ ಗೇಟ್ ವೀಕ್ಷಿಸಿ ತಾವು ಬಂದ ಊರಿನ ದಾರಿ ಹಿಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರವಾಸಿಗರಿಗೆ ನಿರಾಶೆ: ಪ್ರವಾಸಿ ಕೇಂದ್ರ ಗಳ ಬಾಗಿಲು ತೆರೆಯಲು ಜಿಲ್ಲಾಡಳಿತ ಅಧಿಕೃತ ಆದೇಶ ನೀಡದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದಲ್ಲಿ ಗೊಂದಲ ಉಂಟಾದೆ. ಅಬ್ಬಿಫಾಲ್ಸ್, ರಾಜಾಸೀಟ್, ದುಬಾರೆ, ನಿಸರ್ಗ ಧಾಮ ಮತ್ತಿತರ ಕಡೆಗಳಲ್ಲಿ ಭಾನುವಾರ ಪ್ರವಾಸಿಗರು ಕಂಡು ಬಂದರಾದರೂ ಪ್ರವಾಸಿ ತಾಣಗಳಿಗೆ ಹಾಕಲಾಗಿದ್ದ ಲಾಕ್ ಕಂಡು ಪ್ರವಾಸಿಗರಿಗೆ ನಿರಾಶೆಯಾಗಿದೆ.

ಅಧಿಕೃತ ಆದೇಶಕ್ಕೆ ನಿರೀಕ್ಷೆ: ಜಿಲ್ಲೆ ಅನ್ ಲಾಕ್ ಆದರೂ ಪ್ರವಾಸಿ ತಾಣ ತೆರೆ ಯಲು ಜಿಲ್ಲಾಧಿಕಾರಿ ಆದೇಶ ನೀಡಿಲ್ಲ. ಅಬ್ಬಿಫಾಲ್ಸ್ ಕೇಂದ್ರ ತೆರೆಯಲು ಸೋಮ ವಾರ ಕೆ.ನಿಡುಗಣೆ ಗ್ರಾಪಂ ತುರ್ತು ಸಭೆ ಕರೆಯಲಾಗಿದೆ. ಸಭೆಯಲ್ಲಿ ಅಬ್ಬಿಫಾಲ್ಸ್ ತೆರೆಯುವ ಬಗ್ಗೆ ಚರ್ಚೆ ನಡೆಸಿ ಜಿಲ್ಲಾಧಿ ಕಾರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಕೊಕ್ಕಲೆರ ಅಯ್ಯಪ್ಪ ಮಾಹಿತಿ ನೀಡಿದ್ದಾರೆ. ನಗರದ ರಾಜಾ ಸೀಟ್ ಉದ್ಯಾನವನವನ್ನು ಜಿಲ್ಲಾಧಿಕಾರಿಗಳ ಅಧಿಕೃತ ಆದೇಶ ಬಂದ ಬಳಿಕವೇ ತೆರೆಯ ಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಪ್ರಮೋದ್ ಸ್ಪಷ್ಟನೆ ನೀಡಿದ್ದಾರೆ.

ತಾರತಮ್ಯ ಆರೋಪ: ಕೊಡಗಿನ ದುಬಾರೆ ಪ್ರವಾಸಿ ತಾಣದಲ್ಲಿ ಭಾನುವಾರ ಪ್ರವಾಸಿ ಗರು ಕಂಡು ಬಂದರು. ಈ ಸಂದರ್ಭ ಪ್ರವಾಸಿಗರಿಗೆ ಅರಣ್ಯ ಇಲಾಖೆ ತಾರತಮ್ಯ ಎಸಗಿದ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪ್ರಭಾವ ಬೀರಿ ಬಂದ ಪ್ರವಾಸಿ ಗರಿಗೆ ದುಬಾರೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇನ್ನುಳಿದ ಪ್ರವಾಸಿಗರಿಗೆ ದುಬಾರೆ ಸಾಕಾನೆ ಶಿಬಿರ ನೋಡಲು ಬಿಡಲಿಲ್ಲ ಎಂದು ಪ್ರವಾಸಿಗರು ಅಳಲು ತೋಡಿಕೊಂಡಿದ್ದಾರೆ. ಕೆಲ ಪ್ರವಾಸಿಗರಿಗೆ ಮಾತ್ರ ಆನೆ ಕ್ಯಾಂಪ್ ವೀಕ್ಷಣೆಗೆ ನದಿ ದಾಟಲು ಅವಕಾಶ ನೀಡಲಾಗಿದೆ ಎಂದು ಪ್ರವಾಸಿಗರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ವರದಿಯಾಗಿದೆ.

ಆದಾಯ ಖೋತಾ: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿಕೊಂಡು ಸಹಸ್ರಾರು ಮಂದಿ ಬದುಕು ಕಟ್ಟಿಕೊಂಡಿ ದ್ದಾರೆ. ಕೊರೊನಾ ಅಲೆಯಿಂದ ಅವರ ಬದುಕೇ ತತ್ತರಿಸಿದೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್‍ಗಳು, ಪ್ರವಾಸಿ ತಾಣಗಳ ಬೀದಿ ಬದಿ ವ್ಯಾಪಾರಿಗಳು ಕೂಡ ಪ್ರವಾ ಸೋದ್ಯಮ ಲಾಕ್ ಆದ್ದರಿಂದ ನಷ್ಟಕ್ಕೀ ಡಾಗಿದ್ದಾರೆ. ಟೂರಿಸ್ಟ್ ಟ್ಯಾಕ್ಸಿಗಳ ಚಾಲ ಕರು, ಹೋಟೆಲ್ ಬಾಣಸಿಗರು, ರೆಸಾರ್ಟ್ ಗಳ ಕೆಲಸಗಾರರು ನಿರುದ್ಯೋಗಿಗಳಾಗಿ ದ್ದಾರೆ. ಕೆಲ ಪಂಚಾಯಿತಿಗಳಿಗೆ ಪ್ರವಾಸೋ ದ್ಯಮದ ಆದಾಯವೇ ಖೋತಾವಾ ಗಿದ್ದು, ಪಂಚಾಯಿತಿಗಳ ಗ್ರಾಮಾಭಿವೃದ್ಧಿ ಕಾರ್ಯಕ್ಕೂ ಇದರಿಂದ ಹಿನ್ನಡೆಯಾ ಗಿದೆ. ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್, ಅಂಗಡಿ, ಮತ್ತಿತರ ವ್ಯವಸ್ಥೆಗಳ ನಿರ್ವಹಣೆ ಗಾಗಿ ಟೆಂಡರ್ ಪಡೆದವರೂ ಕೂಡ ಕೊರೊನಾ ಅಲೆಯಿಂದ ಲಕ್ಷಾಂತರ ರೂ. ಕಳೆದುಕೊಳ್ಳುವಂತಾಗಿದೆ.

Translate »