ರಸ್ತೆಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ತಲಾ ೧೦,೦೦೦ ರೂ. ಬಡ್ಡಿರಹಿತ ಸಾಲ ವಿತರಣೆ
ಮೈಸೂರು

ರಸ್ತೆಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ತಲಾ ೧೦,೦೦೦ ರೂ. ಬಡ್ಡಿರಹಿತ ಸಾಲ ವಿತರಣೆ

May 5, 2022

ಸಂಸದ ಪ್ರತಾಪ್‌ಸಿಂಹರನ್ನು ಅಭಿನಂದಿಸಿದ ಕೋವಿಡ್, ಸಿಎಂ ಪರಿಹಾರ ನಿಧಿ ಪಡೆದ ಫಲಾನುಭವಿಗಳು
ಮೈಸೂರು, ಮೇ ೪(ಆರ್‌ಕೆಬಿ)- ಪ್ರಧಾನಮಂತ್ರಿ ರಸ್ತೆ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಸ್ವನಿಧಿ ಯೋಜನೆ)ಯಡಿ ೨೦೦ಕ್ಕೂ ಹೆಚ್ಚು ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ ೧೦ ಸಾವಿರ ರೂ. ಬಡ್ಡಿ ರಹಿತ ಸಾಲವನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಬುಧವಾರ ಫಲಾನುಭವಿಗಳಿಗೆ ವಿತರಿಸಿದರು.

ಮೈಸೂರಿನ ಕೆ.ಎಂ.ನಿಶಾAತ್ ಜನ ಸೇವಾ ಕೇಂದ್ರದ ವತಿಯಿಂದ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್‌ಸಿಂಹ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ವಿವಿಧ ಸಾಮಾಜಿಕ ಭದ್ರತಾ ಪಿಂಚಣ ವಿತರಣೆಗೂ ಚಾಲನೆ ನೀಡಿದರು. ಇದೇ ವೇಳೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಕೋವಿಡ್ ಪರಿಹಾರ ನಿಧಿ ಪಡೆದ ಫಲಾನುಭವಿಗಳು ಸಂಸದ ಪ್ರತಾಪ್‌ಸಿಂಹ ಅವರನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಪ್ರತಾಪ್‌ಸಿಂಹ, ಸರ್ಕಾ ರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪದಿದ್ದರೆ ಸರ್ಕಾರ ಯೋಜನೆ ತಂದಿದ್ದರೂ ಪ್ರಯೋಜನವಾಗುವುದಿಲ್ಲ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕೆ.ಎಂ.ನಿಶಾAತ್ ಅವರ ಶ್ರಮವನ್ನು ಪ್ರಶಂಸಿಸಿದರು. ಕೋವಿಡ್ ನಂತರದಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿ ಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಯೋಜನೆಯಡಿ ಫಲಾನುಭವಿಗಳಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ರೂಪಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಬಳಿಕ ಮೈಸೂರಿನ ಅಭಿವೃದ್ಧಿ ಯಾರಿಂದಲೂ ಮಾಡಲು ಸಾಧ್ಯ ವಾಗಿರಲಿಲ್ಲ. ಆ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವಾಗುತ್ತಿದೆ. ಇಂದು ಮೈಸೂರು ವಿಮಾನ ನಿಲ್ದಾಣ, ರೈಲು, ರಸ್ತೆಗಳು ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರ ೨೨,೯೦೦ ಕೋಟಿ ರೂ.ಗಳಲ್ಲಿ ಮೈಸೂರಿನಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪಿಸುತ್ತಿದೆ. ಪೈಪ್‌ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಇದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ ೫ ಸಾವಿರ ರೂ. ಉಳಿತಾಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಎನ್.ಯು. ಸುಬ್ಬಯ್ಯ, ಕೆ.ಆರ್.ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಆರ್.ರಾಮ್‌ಪ್ರಸಾದ್, ಜನಸೇವಾ ಕೇಂದ್ರದ ಕೆ.ಎಂ. ನಿಶಾಂತ್ ಇನ್ನಿತರರು ಉಪಸ್ಥಿತರಿದ್ದರು.

Translate »