ಜಿಲ್ಲೆಯ ವಿವಿಧೆಡೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ: ಕೊರೊನಾ ತಡೆ ಮುಂಜಾಗ್ರತಾ ಕ್ರಮ ಪರಿಶೀಲನೆ
ಚಾಮರಾಜನಗರ

ಜಿಲ್ಲೆಯ ವಿವಿಧೆಡೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭೇಟಿ: ಕೊರೊನಾ ತಡೆ ಮುಂಜಾಗ್ರತಾ ಕ್ರಮ ಪರಿಶೀಲನೆ

April 10, 2020

ಚಾಮರಾಜನಗರ, ಏ.9- ಜಿಲ್ಲೆಯ ವಿವಿಧ ಸ್ಥಳಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಚಾ.ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಗುರುವಾರ ಭೇಟಿ ನೀಡಿ ಕೊರೊನಾ ವೈರಸ್ ತಡೆ ಹಿನ್ನೆಲೆಯಲ್ಲಿ ಕೈಗೊಳ್ಳಲಾ ಗಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.

ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್‍ಪೋಸ್ಟ್, ಕೆಕ್ಕನಹಳ್ಳ ಹಾಗೂ ಮೇಲುಕಾಮನ ಹಳ್ಳಿ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಗತ್ಯ ವಸ್ತುಗಳ ಸಾಗಣೆ, ವಾಹನಗಳಿಗೆ ಮಾಡಲಾಗುತ್ತಿರುವ ಸ್ಯಾನಿಟೈಜೇಷನ್ ಸೇರಿದಂತೆ ಇತರೆ ಮಾಹಿತಿ ಪಡೆದರು. ಅಲ್ಲದೇ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಈ ಸಂದರ್ಭ ಅರಣ್ಯ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರ ನೀಡಿದರು.

ಗುಂಡ್ಲುಪೇಟೆ ಎಪಿಎಂಸಿಗೆ ಭೇಟಿ ನೀಡಿ ಪರಿಶೀ ಲಿಸಿದ ಕಾವೇರಿ ಅವರು, ನಿತ್ಯದ ದಾಸ್ತಾನು, ವರ್ತಕರ ವ್ಯಾಪಾರ ವಿವರಗಳನ್ನು ಪಡೆದರು. ಗುಂಡ್ಲುಪೇಟೆ ಪುರ ಸಭಾ ಕಚೇರಿಗೆ ಭೇಟಿ ನೀಡಿ ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಪ್ರಕ್ರಿಯೆ ವೀಕ್ಷಿಸಿದರು.

ಪಟ್ಟಣದ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಅಲ್ಲಿ ಪೂರೈಸುತ್ತಿರುವ ಉಪಹಾರ, ಊಟ ಹಾಗೂ ಸೇವಾ ಕಾರ್ಯ ಪರಿಶೀಲಿಸಿದರು. ನಂತರ ನಿರಾಶ್ರಿತರ ಕೇಂದ್ರಕ್ಕೂ ಭೇಟಿ ಕೊಟ್ಟು ಕಲ್ಪಿಸಲಾಗಿರುವ ಸೌಲಭ್ಯ ಗಳನ್ನು ವೀಕ್ಷಿಸಿದರು. ಬಳಿಕ ಚಾ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಹರಡದಂತೆ ತಡೆಯಲು ವಹಿಸಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದರು.

ನಂತರ ಮಾತನಾಡಿದ ಬಿ.ಬಿ.ಕಾವೇರಿ, ಕೊರೊನಾ ಹರಡುವಿಕೆ ತಡೆಯುವ ಸಂಬಂಧ ನಿಯೋಜಿಸಿರುವ ನೋಡೆಲ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಮುಂದು ವರೆಸಬೇಕು. ಆರೋಗ್ಯ ಸಂಬಂಧ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೇ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ವೈದ್ಯಾಧಿಕಾರಿಗಳಿಂದ ಕ್ವಾರೆಂಟೈನ್‍ನಲ್ಲಿರುವವರ ವಿವರ, ಆರೋಗ್ಯ ತಪಾಸಣೆ ಮತ್ತಿತರ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು. ಅಲ್ಲದೇ ಮಾಸ್ಕ್, ಸ್ಯಾನಿಟೈಸರ್ ಇತರೆ ಸುರಕ್ಷತಾ ಸಾಧನಗಳಿಗೆ ಕೊರತೆಯಾ ಗಬಾರದು. ಸಾಧ್ಯವಿರುವ ಎಲ್ಲಾ ಕಡೆ ಮಾಸ್ಕ್‍ಗಳನ್ನು ತರಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು. ಔಷಧಗಳ ದಾಸ್ತಾನು ಕೂಡ ಇರಬೇಕು ಎಂದರು.

ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮುಂದುವರೆಯಬೇಕು. ರೈತರು ಬೆಳೆದ ತೋಟಗಾರಿಕೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಶ್ಯಕ ಕ್ರಮಕ್ಕೆ ಮುಂದಾಗಬೇಕು. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಬಿತ್ತನೆ ಬೀಜ, ಗೊಬ್ಬರ ಕೃಷಿ ಪರಿಕರಗಳು ಲಭ್ಯವಾಗಬೇಕು ಎಂದರು.

ತರಕಾರಿ, ಹಣ್ಣು, ಹಾಲು, ಸೇರಿದಂತೆ ದಿನ ಬಳಕೆಯ ಸಾಮಾಗ್ರಿಗಳಿಗೆ ಕೊರತೆಯಾಗಬಾರದು. ವಲಸೆ, ಇತರೆ ಕಾರ್ಮಿಕರು, ಆಶ್ರಯ ಶಿಬಿರಗಳಲ್ಲಿ ಇರುವ ನಿರಾಶ್ರಿತರಿಗೆ ಆಹಾರ, ಹಾಲು, ಆರೋಗ್ಯ ತಪಾಸಣೆ ಸೌಲಭ್ಯ ಸಮರ್ಪಕವಾಗಿ ಸಿಗಬೇಕೆಂದರು.

ಸಭೆಯಲ್ಲಿ ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ನಾರಾಯಣರಾವ್, ಜಿಲ್ಲಾ ಎಸ್ಪಿ ಹೆಚ್.ಡಿ.ಆನಂದ ಕುಮಾರ್, ಎಡಿಸಿ ಸಿ.ಎಲ್.ಆನಂದ್, ಎಸಿ ನಿಖಿತಾ ಎಂ. ಚಿನ್ನಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Translate »