ಮೈಸೂರು, ಆ.20-ಕರ್ನಾಟಕ ರಾಜ್ಯ ಕೇಂದ್ರ ಗ್ರಂಥಾಲಯದ ವತಿಯಿಂದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಿದೆ. ಹಿರಿಯ ಕವಿ ಡಾ.ದೊಡ್ಡರಂಗೇಗೌಡರ ಅಧ್ಯಕ್ಷತೆಯ ಸಮಿತಿಯಲ್ಲಿ 15 ಸದಸ್ಯ ರಿದ್ದು, ಅವರಲ್ಲಿ ಮೈಸೂರಿನ ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಮತ್ತು ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಒಬ್ಬರಾಗಿದ್ದಾರೆ. ಇವರನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ. ಮೈಸೂರಿನ ಸಾರಸ್ವತ ಲೋಕದಲ್ಲಿ ಚಿರ ಪರಿಚಿತವಾದ ಹೆಸರು ಲೋಕಪ್ಪ ಅವರದು. ಪುಸ್ತಕ ಮುದ್ರಣ, ಪ್ರಕಟಣೆ, ಶಿಕ್ಷಣ, ಸಾಹಿತ್ಯ ಸೇವೆಯನ್ನು ಬಹಳ ಕಾಲದಿಂದ ಅತ್ಯಂತ ನಿಷ್ಠೆಯಿಂದ ಮಾಡುತ್ತಾ ಬಂದಿದ್ದಾರೆ.
ಲೋಕಪ್ಪ ಅವರು ಅಖಿಲ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಬರಹಗಾರರ ಮತ್ತು ಪ್ರಕಾಶಕ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ, ನೃಪತುಂಗ ವಿದ್ಯಾ ಸಂಸ್ಥೆ ಟ್ರಸ್ಟಿಯಾಗಿ, ತರಳಬಾಳು ಸಮಾಗಮದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರೂ, ಹೀಗೆ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಉದಯೋನ್ಮುಖ ಲೇಖಕರಿಗೆ `ಸಂವಹನ ಯುವ ಲೇಖಕ’ ಪ್ರಶಸ್ತಿಯನ್ನು 10 ಸಾವಿರ ರೂ. ನಗದಿನೊಂದಿಗೆ ನೀಡುತ್ತಾ ಬಂದಿರುವ ಲೋಕಪ್ಪನವರನ್ನು ಇತ್ತೀಚೆಗೆ ಮೈಸೂರು ನಾಗರಿ ಕರು, ಅವರ ಅಭಿಮಾನಿಗಳು, ಹಿತೈಷಿಗಳು ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿ `ಲೋಕಪ್ರಿಯ’ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ.