ಕೋವಿಡ್ ಮುಕ್ತರು ತಕ್ಷಣ ಕ್ಷಯ ಪರೀಕ್ಷೆ ಮಾಡಿಸಿ
News

ಕೋವಿಡ್ ಮುಕ್ತರು ತಕ್ಷಣ ಕ್ಷಯ ಪರೀಕ್ಷೆ ಮಾಡಿಸಿ

August 18, 2021

ಬೆಂಗಳೂರು, ಆ.17(ಕೆಎಂಶಿ)-ಕೋವಿಡ್ ಸೋಂಕಿನಿಂದ ಗುಣಮುಖರಾದವರು ತಕ್ಷಣವೇ ಕ್ಷಯರೋಗ ಪರೀಕ್ಷೆ ಮಾಡಿಸಿ ಕೊಳ್ಳಬೇಕೆಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‍ನಿಂದ ಶ್ವಾಸಕೋಶಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಕ್ಷಯರೋಗವು ಇದಕ್ಕೆ ಸಂಬಂಧಪಟ್ಟಿದ್ದೇ ಆಗಿರುವುದರಿಂದ ಸೋಂಕಿತಕ್ಕೆ ಒಳಗಾದವರು ಮುನ್ನೆಚ್ಚರಿಕೆಯಾಗಿ ಪರೀಕ್ಷೆಗೆ ಒಳ ಪಡಿಸಿಕೊಂಡು ಮುಂದಾಗುವ ಅನಾಹುತ ತಪ್ಪಿಸಿ ಕೊಳ್ಳುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಇದುವರೆಗೂ 28 ಲಕ್ಷ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಕೆಲವರಿಗೆ ಪರೀಕ್ಷೆ ಮಾಡಿದಾಗ ಶೇಕಡ 3.9ರಷ್ಟು ಮಂದಿಗೆ ಕ್ಷಯರೋಗ ಪತ್ತೆಯಾಗಿದೆ.

ಪ್ರಾಥಮಿಕ ಹಂತದಲ್ಲೇ ರೋಗಕ್ಕೆ ಚಿಕಿತ್ಸೆ ಪಡೆದು ಕೊಂಡರೆ ದೊಡ್ಡ ಅನಾಹುತವನ್ನು ತಪ್ಪಿಸಬಹುದು. ಮುಂಜಾಗ್ರತಾ ಕ್ರಮವಾಗಿ ಸಮೀಪದ ಸರ್ಕಾರಿ ಇಲ್ಲವೇ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಿಸಿ ಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ರಾಜ್ಯ ಸರ್ಕಾರ ಆಗಸ್ಟ್ 31 ರವರೆಗೆ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಗುತ್ತದೆ ಎಂದು ತಿಳಿಸಿದರು.

2017ರಿಂದ ಆರಂಭಿಸಿ 75 ಲಕ್ಷ ಜನರನ್ನು ಗುರುತಿಸಿ, 88% ಜನರಿಗೆ ಪರೀಕ್ಷೆ ಮಾಡಲಾಗಿದೆ. 3.9% ಜನರಲ್ಲಿ ಕ್ಷಯ ಪತ್ತೆಯಾಗಿದೆ. ಅದೇ ರೀತಿ 2019, 2020ರಲ್ಲೂ ಮಾಡಲಾಗಿದೆ. ಕೋವಿಡ್‍ನಿಂದಾಗಿ ಕ್ಷಯರೋಗ ಪತ್ತೆ ಪರೀಕ್ಷೆ ಕಡಿಮೆಯಾಗಿದೆ. 2025ರ ವೇಳೆಗೆ ಕ್ಷಯರೋಗ ಮುಕ್ತ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.

ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಹಿನ್ನೆಲೆ ಯಲ್ಲಿ, ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯ ದಲ್ಲಿ ಒಂದೂವರೆ ಕೋಟಿ ಮಕ್ಕಳಿದ್ದು, ಎಲ್ಲರಿಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ‘ಆರೋಗ್ಯ ನಂದನ’ಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಈ ಯೋಜನೆ ಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿ, ಪೌಷ್ಟಿಕ ಆಹಾರ ನೀಡಲಾಗು ವುದು. ಮುನ್ನೆಚ್ಚರಿಕೆ ಕ್ರಮ ವಹಿಸಿ ಮಕ್ಕಳ ಆರೋಗ್ಯ ಸುಧಾರಿಸಲು ಕ್ರಮ ವಹಿಸಲಾಗುವುದು ಎಂದರು.

ರಾಜ್ಯದಲ್ಲಿ ಡಿಸೆಂಬರ್ ಒಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ದೆಹಲಿಗೆ ಪ್ರವಾಸ ಮಾಡಿ ಸಂಬಂಧಿಸಿದ ಕೇಂದ್ರ ಸಚಿವರೊಂ ದಿಗೆ ಸಮಾಲೋಚಿಸಿ ಹೆಚ್ಚು ಲಸಿಕೆಗೆ ಬೇಡಿಕೆ ಇಡ ಲಾಗುವುದು. ಶೇ.25ರಷ್ಟು ಲಸಿಕೆಯನ್ನು ಖಾಸಗಿ ಕ್ಷೇತ್ರ ನೀಡಬಹುದು. ಕಂಪನಿಗಳು ಸಿಎಸ್ ಆರ್‍ನಡಿ ಲಸಿಕೆ ಖರೀದಿಸಿ ಸರ್ಕಾರಕ್ಕೆ ನೀಡಿ ಎಂದು ಮನವಿ ಮಾಡಲಾಗುತ್ತಿದೆ. ಇದರಿಂದ ಲಸಿಕೆ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗಿ ವೇಗವಾಗಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Translate »