ಸಮಾಜದ ಶಾಂತಿ ಕದಡುವವರಿಗೆ ಪ್ರೋತ್ಸಾಹ ನೀಡಬೇಡಿ
ಮೈಸೂರು

ಸಮಾಜದ ಶಾಂತಿ ಕದಡುವವರಿಗೆ ಪ್ರೋತ್ಸಾಹ ನೀಡಬೇಡಿ

April 25, 2022

ಮೈಸೂರು, ಏ.24(ಎಂಕೆ)- ‘ಸರ್ವಜನಾಂಗದ ಶಾಂತಿಯ ತೋಟ’ವಾದ ರಾಜ್ಯದಲ್ಲಿನ ಶಾಂತಿಯುತ ವಾತಾವರಣವನ್ನು ಕಲುಷಿತಗೊಳಿಸಲು ಪ್ರತಿನಿತ್ಯ ಪ್ರಯತ್ನಿಸುತ್ತಿರುವ ಕೆಲ ಸಂಘಟನೆಗಳು ವಿನಾಃ ಕಾರಣ ಒಂದಲ್ಲಾ ಒಂದು ಸಮಸ್ಯೆ ಸೃಷ್ಟಿ ಮಾಡುತ್ತಿವೆ. ಸಮಾಜದ ಶಾಂತಿ ಕದಡುವವರಿಗೆ ಯಾವುದೇ ಪೆÇ್ರೀತ್ಸಾಹ ನೀಡದಿರಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.
ಮೈಸೂರಿನ ಸಿದ್ದಿಕ್‍ನಗರದಲ್ಲಿರುವ ಖಾಸಗಿ ಸಮುದಾಯ ಭವನದಲ್ಲಿ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್ ನೇತೃತ್ವದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದೂ -ಮುಸ್ಲಿಮರ ನಡುವೆ ಭೇದ-ಭಾವ ಇರಬಾರದು. ಸಹೋದರರಂತೆ ಪರಸ್ಪರ ಕಷ್ಟ-ಸುಖದಲ್ಲಿ ಭಾಗಿಯಾಗುವ ವಾತಾವರಣ ನಿರ್ಮಾಣ ಆಗಬೇಕು. ಶಾಂತಿ ಕದಡುವವರಿಗೆ ಬೆಂಬಲ ಕೊಡಬಾರದು ಎಂದರು.

ಮೈಸೂರು ನಗರದಲ್ಲಿ ಪ್ರಥಮವಾಗಿ ರಂಜಾನ್ ಇಫ್ತಿಯಾರ್ ಕೂಟದಲ್ಲಿ ಇಸ್ಲಾಂ ಧರ್ಮ ಗುರುಗಳ ಹಾಗೂ ಹಿಂದೂ ಧರ್ಮದ ಅರ್ಚಕರು ದೇವರಲ್ಲಿ ಪಾರ್ಥನೆ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ನಾವು ಅವಕಾಶ ಕೊಡುವುದಿಲ್ಲ. ನಾವು ಅಣ್ಣ-ತಮ್ಮಂದಿರು ಎಂಬ ಸಂದೇಶವನ್ನು ಈ ಸ್ಥಳದಿಂದ ರವಾನಿಸುವ ಕೆಲಸ ಆಗಿದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತ ನಾಡಿ, ಮಾಜಿ ಪ್ರಧಾನಿ ದೇವೇಗೌಡರು ಬಹಳ ಹಿಂದಿ ನಿಂದಲೂ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಇದೊಂದು ಪರಂಪರೆಯಾಗಿದೆ. ಮಠಗಳಲ್ಲಿ ನಮಾಜ್ ಮಾಡಲು ಪೇಜಾವರ ಶ್ರೀಗಳು ಅವಕಾಶ ಮಾಡಿಕೊಟ್ಟಿದ್ದರು. ಮೈಸೂರು ಮಹಾರಾಜರ ನಾಡು, ಸಂಸ್ಕೃತಿಯ ಬೀಡು. ಈ ನೆಲ ಶಾಂತಿಯನ್ನು ಬಯಸುತ್ತದೆ. ಹಿಂದೂ, ಮುಸ್ಲಿಮರು ಸೇರಿ ಸೌಹಾರ್ದ ಇಫ್ತಿಯಾರ್ ಕೂಟ ಆಯೋಜಿಸಿದ್ದು, ರಾಜ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ಆಶಿಸಿದರು.

ಹೊಸ ಹುರುಪಿನಲ್ಲಿ ಮೈಮರೆಯಬೇಡಿ: ಪಕ್ಷ ಕಟ್ಟುವ ಕೆಲಸವನ್ನು ಮೈಸೂರಿನಿಂದಲೇ ಆರಂಭಿಸಿದ್ದೇನೆ. ಮುಂದೆ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗಲಿ. ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿ. ಪಕ್ಷಕ್ಕೆ ರಾಜ್ಯದಾದ್ಯಂತ ಉತ್ತಮ ಜನಬೆಂಬಲ ದೊರೆ ಯುತ್ತಿರುವುದರಿಂದ ಕಾರ್ಯಕರ್ತರಿಗೆ ಹೊಸ ಹುರುಪು ಬಂದಿದೆ. ಆದರೆ ಹೊಸ ಹುರುಪಿನಲ್ಲಿ ಮೈಮರೆಯಬೇಡಿ ಹುಷಾರಾಗಿರಿ. ಎಲ್ಲಾ ಪಾಲಿಕೆ ಸದಸ್ಯರು, ಮಾಜಿ ಮೇಯರ್‍ಗಳ ಪರಿಚಯ ಇದೆ. ನಾನೇನು ಹುಚ್ಚಾಸ್ಪತ್ರೆಗೆ ಹೋಗಿರಲಿಲ್ಲ. ಸ್ವಲ್ಪ ದಿನ ದೂರ ಇದ್ದೆ ಅಷ್ಟೇ. ಎಲ್ಲರೂ ಒಂದು ಕುಟುಂಬದಂತೆ. ಮುಂದಿನ 25 ವರ್ಷ ಜೆಡಿಎಸ್ ಆಡಳಿತ ನಡೆಸಲು ಅವಕಾಶ ಕರುಣಿಸಲು ಎಂದು ಪಾರ್ಥನೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಮೈಸೂರು ಸರ್ಖಾಜಿ, ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಎಂಎಲ್‍ಸಿ ಮಂಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದಾದಾಪೀರ್ ಶೇಕ್, ಜೆಡಿಎಸ್ ಮುಖಂಡರಾದ ಹೆಚ್.ಕೆ. ರಾಮು, ಕೆ.ವಿ.ಮಲ್ಲೇಶ್, ಪಾಲಿಕೆಯ ಜೆಡಿಎಸ್ ಸದಸ್ಯರು, ಕಾರ್ಯಕರ್ತರು ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದರು.

Translate »