ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನು ಸ್ವೀಕರಿಸುವೆ ಎಂದಿದ್ದರು ಡಾ.ರಾಜ್
ಮೈಸೂರು

ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನು ಸ್ವೀಕರಿಸುವೆ ಎಂದಿದ್ದರು ಡಾ.ರಾಜ್

April 25, 2022

ಮೈಸೂರು, ಏ.24(ಎಸ್‍ಬಿಡಿ)- ಮೊದಲು ರಾಷ್ಟ್ರಕವಿ ಕುವೆಂಪು ಅವರಿಗೆ `ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದ ನಂತರ ನಾನೂ ಸ್ವೀಕರಿಸುತ್ತೇನೆ ಎಂದು ವರನಟ ಡಾ.ರಾಜ್‍ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದರು ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಸ್ಮರಿಸಿದರು.

ಡಾ.ರಾಜ್‍ಕುಮಾರ್ 93ನೇ ಜಯಂತಿ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗಾನ ವೈದ್ಯಲೋಕ ಸಂಸ್ಥೆ ಸಹಯೋಗದಲ್ಲಿ ವಿಜಯ ನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ `ಡಾ.ರಾಜ್ ಗಾನ ಸಮರ್ಪಣೆ’ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಗಾ ರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ `ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ಸಂಬಂಧ ಡಾ.ರಾಜ್ ಕುಮಾರ್ ಅವರನ್ನು ಭೇಟಿಯಾದಾಗ `ಕುವೆಂಪು ಅವರಿಗೆ ಈ ಪ್ರಶಸ್ತಿ ನೀಡಿದ್ದೀರಾ?’ ಎಂದು ಪ್ರಶ್ನಿಸಿ ದ್ದರು. ಇಲ್ಲ ಎಂದು ತಿಳಿದು `ಮೊದಲು ಕುವೆಂಪು ಅವರಿಗೆ ಈ ಪ್ರಶಸ್ತಿ ಸಲ್ಲಬೇಕು, ನಂತರ ನಾನು ಸ್ವೀಕರಿಸುತ್ತೇನೆ’ ಎಂದಿದ್ದರು ಎಂದು ತಿಳಿಸಿದರು.

ಕುವೆಂಪು ಅವರ ಬಗ್ಗೆ ಡಾ.ರಾಜ್‍ಕುಮಾರ್ ಅಪಾರ ಗೌರವ-ಪ್ರೀತಿ ಹೊಂದಿದ್ದರು. 1993ರ ಜನವರಿ ಯಲ್ಲಿ ಮೈಸೂರಿನ ಕಲಾಮಂದಿರದಲ್ಲಿ ನಾವು ಏರ್ಪಡಿಸಿದ್ದ `ಕುವೆಂಪು ನಾಟಕೋತ್ಸವ’ವನ್ನು ರಾಜ್‍ಕುಮಾರ್ ಉದ್ಘಾಟಿಸಿದ್ದರು. ಅದಕ್ಕೂ ಮುನ್ನ ಕುವೆಂಪು ಅವರನ್ನು ಅವರ ನಿವಾಸದಲ್ಲಿ ಭೇಟಿಯಾದಾಗ ಡಾ.ರಾಜ್‍ಕುಮಾರ್ ಉದ್ದಂಡ ನಮಸ್ಕಾರ ಮಾಡಿದ್ದರು. ಪಾರ್ವತಮ್ಮ ಅವರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್‍ಕುಮಾರ್ ಅವರು ಸುಜಾತ ಹೋಟೆಲ್‍ನಲ್ಲಿ ತಂಗಿದ್ದರು. ಸ್ವಂತ ಖರ್ಚಿನಲ್ಲೇ ಪ್ರಯಾಣ ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಈಗಿನ ಕೆಲ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಎಷ್ಟು ಲಕ್ಷ ಕೊಡುತ್ತೀರಿ? ಎಂದು ಕೇಳುತ್ತಾರೆ. ಡಾ.ರಾಜ್‍ಕುಮಾರ್ ಅವರ ಸರಳತೆ, ಆದರ್ಶ ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು.
ಮೈಸೂರಿನ ಪುರಭವನದಲ್ಲಿ `ಎಚ್ಚಮ್ಮ ನಾಯಕ’ ನಾಟಕ ಪ್ರದರ್ಶನವಿತ್ತು. ನಾನೂ ಅದರಲ್ಲಿ ಪಾತ್ರ ನಿರ್ವಹಿಸಿದ್ದೆ. ಡಾ.ರಾಜ್‍ಕುಮಾರ್ ಅವರು ಸಂಪೂರ್ಣವಾಗಿ ನಾಟಕ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗಲೇ ನಾನು ಅವರನ್ನು ಮೊದಲ ಬಾರಿ ಭೇಟಿಯಾಗಿದ್ದು. ಜನಪ್ರಿಯತೆಯ ಉತ್ತುಂಗಕ್ಕೇರಿದರೂ ರಾಜ್‍ಕುಮಾರ್ ಅವರಲ್ಲಿ ಸರಳತೆ ಮರೆಯಾಗಿರಲಿಲ್ಲ. ವಿಶ್ವ ಚಿತ್ರರಂಗದಲ್ಲಿ ಜಾನಪದ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲಾ ಬಗೆಯ ಪಾತ್ರಗಳನ್ನು ನೈಜತೆಯಿಂದ ಸಮರ್ಥವಾಗಿ ಅಭಿನಯಿಸಿದ ನಟ, ಸಾವಿರಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಗಾಯಕ ಡಾ.ರಾಜ್‍ಕುಮಾರ್ ಮಾತ್ರ. ಅವರು ಅಭಿನಯಿಸಿದ 208 ಚಿತ್ರಗಳನ್ನು ಹೊಸ ಕಲಾವಿದರು ವೀಕ್ಷಿಸಿದರೆ ಉತ್ತಮ ಮಾರ್ಗದರ್ಶನ, ಅನುಭವ ದೊರಕುತ್ತದೆ ಎಂದು ಅಭಿಪ್ರಾಯಿಸಿದರು.

ರಾಜ್‍ಕುಮಾರ್ `ಯುಗಪುರುಷ’: ಹಿರಿಯ ರಂಗ ನಿರ್ದೇಶಕ ಪ್ರೊ.ಹೆಚ್.ಎಸ್.ಉಮೇಶ್ ಮಾತನಾಡಿ, ಡಾ.ರಾಜ್‍ಕುಮಾರ್ ಅವರು ಚಿತ್ರರಂಗದ `ಯುಗಪುರುಷ’. ಆ ಕಾಲಘಟ್ಟದ ಘಟನೆ, ಸಂಗತಿ ಗಳಿಗೆ ತಮ್ಮ ಸೃಜನಶೀಲ ನಟನೆ ಮೂಲಕ ಸ್ಪಂದಿಸಿ ದರು. ಅವರು ಸಿನಿಮಾ ನಟ ಹಾಗೂ ಗಾಯಕನಾಗಿ ಮಾತ್ರ ಉಳಿಯದೆ ಹಲವು ಭಕ್ತಿ ಗೀತೆಗಳ ಮೂಲಕ ಸಂತನಾದರು. ಅವರಲ್ಲಿ ಸಮಗ್ರತೆ ಇತ್ತು. ಡಾ.ರಾಜ್‍ಕುಮಾರ್ ನೇತೃತ್ವ ವಹಿಸಿದ್ದರಿಂದ ಗೋಕಾಕ್ ಚಳವಳಿಗೆ ಶಕ್ತಿ ಬಂದಿತು. ಕನ್ನಡದ ಶಕ್ತಿಯೂ ಹೆಚ್ಚಿತು. ಕನ್ನಡದ ಧ್ವನಿಯಾಗಿರುವ ಡಾ.ರಾಜ್ ಕುಮಾರ್ ವ್ಯಕ್ತಿ ವಿವರ ಕಾಲಕ್ರಮೇಣ ಮರೆಯಾಗ ಬಹುದು. ಆದರೆ ಅವರ ಶಕ್ತಿ ಉಳಿಯುತ್ತದೆ. ಅವರು ಅಮರತ್ವದ ಸ್ವರೂಪ ಎಂದು ತಿಳಿಸಿದರು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್(ಸಿಪಿಕೆ), ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ನಿಕಟ ಪೂರ್ವ ಅಧ್ಯಕ್ಷ ಹಾಗೂ ಗಾನ ವೈದ್ಯ ಲೋಕ ಸಂಸ್ಥೆ ಗೌರವಾಧ್ಯಕ್ಷ ಡಾ.ವೈ. ಡಿ.ರಾಜಣ್ಣ, ಸಂಸ್ಥೆ ಅಧ್ಯಕ್ಷ ಡಾ.ಟಿ.ರವಿಕುಮಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ವೈ.ಡಿ.ರಾಜಣ್ಣ, ಡಾ.ಟಿ.ರವಿಕುಮಾರ್, ಡಾ.ಎ. ಎಸ್.ಪೂರ್ಣಿಮಾ, ಡಾ.ಪಿ.ಚಂದ್ರಶೇಖರ್, ಶ್ರೀಲತಾ ಮನೋಹರ್, ಡಾ.ಶ್ಯಾಮಪ್ರಸಾದ್, ಸಿ.ಎಸ್.ವಾಣಿ, ಡಾ.ಶಿವಕುಮಾರ್ ಮತ್ತಿತರರು ಡಾ.ರಾಜ್‍ಕುಮಾರ್ ಅವರ ಹಲವು ಗೀತೆಗಳನ್ನು ಪ್ರಸ್ತುತಪಡಿಸಿದರು.

Translate »