ಕೊರೊನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು
ಮೈಸೂರು

ಕೊರೊನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು

July 6, 2020

ಬೆಂಗಳೂರು, ಜು. 5- ಕೊರೊನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಪ್ರಯೋಗಾಲಯಗಳು ನೇರವಾಗಿ ರೋಗಿಗಳಿಗೆ ರಿಪೋರ್ಟ್ ನೀಡುತ್ತಿರುವುದರಿಂದ ಅನಾಹುತಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರ ಜೂ.27ರಂದು ರೋಗಿಗಳಿಗೆ ಸೋಂಕು ಫಲಿತಾಂಶ ನೇರವಾಗಿ ನೀಡದಂತೆ ಸರ್ಕಾರಿ ಹಾಗೂ ಖಾಸಗಿ ಪ್ರಯೋ ಗಾಲಯಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು.

ಶನಿವಾರ ಹೊಸ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತರು, ಜೂ.27ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳು ಫಲಿತಾಂಶ ನೀಡುವ ಕುರಿತು ಈ ಹಿಂದಿನ ನಿಯಮವನ್ನೇ ಅನುಸರಿಸಬಹುದು. ಆದರೂ ನಿತ್ಯ ಕೊರೊನಾ ಪಾಸಿಟಿವ್/ನೆಗೆಟಿವ್ ಪ್ರಕರಣ ಐಸಿಎಂ ಪೋರ್ಟಲ್‍ಗೆ ಅಪ್ಲೋಡ್ ಮಾಡಬೇಕು ಎಂದಿದ್ದಾರೆಂದು ಹೇಳಲಾಗುತ್ತಿದೆ.

ಇದರಿಂದ ಇನ್ನು ಮೊದಲಿನಂತೆ ಸೋಂಕಿತರಿಗೆ ನೇರವಾಗಿ ಮೊಬೈಲ್ ಸಂದೇಶ ಅಥವಾ ದೂರವಾಣಿ ಕರೆ ಮಾಡಿ ಸೋಂಕಿನ ವಿಚಾರ ತಿಳಿಸಲಾಗುತ್ತದೆ. ಇದರಿಂದ ತಕ್ಷಣ ಆಂಬುಲೆನ್ಸ್ ನೆರವು ಪಡೆದು ಕೊರೊನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾಗಲು ನೆರವಾಗಲಿದೆ. ಇತ್ತೀಚೆಗೆ ಸಚಿವ ಆರ್.ಅಶೋಕ್, ಪ್ರಯೋಗಾಲಯ ಗಳು ಸೋಂಕಿತರಿಗೆ ನೇರವಾಗಿ ಕರೆ ಮಾಡಿ ನೀವು ಪಾಸಿಟಿವ್ ಎಂದು ಹೇಳುತ್ತವೆ. ಇದರಿಂದ ಸೋಂಕಿತರು ಆಘಾತಕ್ಕೀಡಾಗುತ್ತಾರೆ. ಹೀಗಾಗಿ ಇನ್ನು ಫಲಿತಾಂಶವನ್ನು ಮೊದಲು ಐಸಿಎಂಆರ್ ಪೋರ್ಟಲ್‍ಗೆ ಅಪ್‍ಲೋಡ್ ಮಾಡಿ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದ್ದರು.

Translate »