ಮುಷ್ಕರ ಹಿಂಪಡೆದ ವೈದ್ಯರು
ಮೈಸೂರು

ಮುಷ್ಕರ ಹಿಂಪಡೆದ ವೈದ್ಯರು

August 24, 2020

ಮೈಸೂರು, ಆ.23(ಆರ್‍ಕೆಬಿ)- ನಂಜನ ಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣ ಸಂಬಂಧ 3 ದಿನದಿಂದ ಮುಷ್ಕರ ನಡೆಸು ತ್ತಿದ್ದ ಸರ್ಕಾರಿ ವೈದ್ಯರು ಕೆಲವು ಷರತ್ತು ಗಳೊಂದಿಗೆ ಇಂದು ಮುಷ್ಕರವನ್ನು ಹಿಂಪಡೆ ದಿದ್ದು, ಸೋಮವಾರ (ಆ.24)ದಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿ ಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ ಇಂದಿಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಡಾ.ನಾಗೇಂದ್ರ ಸಾವು ಅಧಿಕಾರಿಗಳ ಒತ್ತಡದಿಂದ ಆಗಿದೆ. ಹಾಗಾಗಿ ಅಧಿಕಾರಿ ಯನ್ನು ಅಮಾನತುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ವೈದ್ಯಾಧಿ ಕಾರಿಗಳು ಕಳೆದ ಶುಕ್ರವಾರದಿಂದ ಕರ್ತವ್ಯಕ್ಕೆ ಹಾಜರಾಗದೆ ಮೈಸೂರಿನ
ಡಿಹೆಚ್‍ಓ ಕಚೇರಿ ಎದುರು ಧರಣಿ ನಡೆಸುತ್ತಿದ್ದರು. ಇಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನಿರ್ದೇಶನದ ಮೇರೆಗೆ ಕೆಲವು ಷರತ್ತುಗಳನ್ನು ವಿಧಿಸಿ, ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ಡಾ.ದೇವಿ ಆನಂದ ತಿಳಿಸಿದರು.

ಮೈಸೂರು ಜಿಪಂ ಸಿಇಓ ಪ್ರಶಾಂತ್‍ಕುಮಾರ್ ಮಿಶ್ರಾ ರೀತಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಎಲ್ಲಾ ತನಿಖೆ ಅನ್ವಯಿಸಬೇಕು. ಕೋವಿಡ್ ಸಮುದಾಯಕ್ಕೆ ಹರಡಿರುವುದರಿಂದ ನೋಡಲ್ ಅಧಿಕಾರಿಗಳಾಗಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ನೇಮಿಸಬೇಕು. ಮುಖ್ಯಮಂತ್ರಿಗಳ ಆದೇಶದಂತೆ, ನಿಷ್ಪಕ್ಷತಾತ ಮತ್ತು ಸಮಗ್ರ ತನಿಖೆ ನಡೆಸಬೇಕು. ವಾರದೊಳಗೆ ತನಖಾ ವರದಿ ಬರಬೇಕು. ಅಲ್ಲಿಯವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಿಸಲಿದ್ದೇವೆ ಎಂದು ಪ್ರಕಟಿಸಿದರು.

ಕೋವಿಡ್ ಕೇರ್ ಸೆಂಟರ್‍ಗಳಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಚಿಕಿತ್ಸೆ ಮಾತ್ರ ನಮ್ಮ ಜವಾಬ್ದಾರಿ. ಬಿಬಿಎಂಪಿ ಮಾದರಿಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ನೇಮಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳೇ ನೋಡಲ್ ಅಧಿಕಾರಿಯಾಗಬೇಕು: ಐಎಎಸ್, ಐಪಿಎಸ್, ಕಂದಾಯ ಅಧಿಕಾರಿಗಳನ್ನು ಕೋವಿಡ್ ನಿಯಂತ್ರಣಕ್ಕೆ ನೋಡಲ್ ಅಧಿಕಾರಿ ಗಳಾಗಿ ನೇಮಿಸುವುದು ಬೇಡ. ನೋಡಲ್ ಅಧಿಕಾರಿಯಾಗಿ ಅವರಿಗೆ ವೈದ್ಯಕೀಯ ಮತ್ತು ಔಷಧಿಗಳ ಬಗ್ಗೆ ಸಾಮಾನ್ಯ ಜ್ಞಾನವೂ ಇರುವುದಿಲ್ಲ. ಅಧಿಕಾರಿಯೊಬ್ಬರು ಆಕ್ಷಿಜನ್‍ನ್ನು ಸ್ವಲ್ಪ ಸ್ವಲ್ಪ ಕೊಡಿ ಎಂಬಂತಹ ಹೇಳಿಕೆ ನೀಡುತ್ತಾರೆಂದರೆ ಅವರಿಗೆ ಆರೋಗ್ಯ ಚಿಕಿತ್ಸೆ ಬಗ್ಗೆ ಏನು ಗೊತ್ತಿದೆ? ಆಕ್ಸಿಜನ್ ವಿಚಾರದಲ್ಲಿ ಚೌಕಾಸಿ ಮಾಡಲಾಗು ತ್ತದೆಯೇ? ಎಂದು ಪ್ರಶ್ನಿಸಿದರು. ಆರೋಗ್ಯ ಇಲಾಖೆಯಲ್ಲಿಯೇ ಟಾಸ್ಕ್‍ಫೋರ್ಸ್ ರೀತಿ ಮಾಡಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನೇ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಬೇಕು. ಆಳವಾದ ಪರಿಣಿತ ವೈದ್ಯರು ನಮ್ಮ ಇಲಾಖೆಯಲ್ಲೇ ಇದ್ದಾರೆ. ಕೋವಿಡ್‍ನ ಅಗತ್ಯತೆಗಳನ್ನು ಪೂರೈಸಲು ನಮ್ಮ ಆರೋಗ್ಯ ಅಧಿಕಾರಿಗಳನ್ನೇ ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಸಿಬ್ಬಂದಿ ಕೊರತೆ ನೀಗಿಸಿ: ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಲಾಬ್ ಟೆಕ್ನೀಷಿಯನ್‍ಗಳು ಆರು ತಿಂಗಳಿಂದ ರಜೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅತೀ ಹೆಚ್ಚು ಅಪಾಯಕಾರಿ ಕೆಲಸ ಅವರದ್ದು. ಬಿಬಿಎಂಪಿ ಗುತ್ತಿಗೆ ಆಧಾದ ಮೇಲೆ ಅರೆಕಾಲಿಕ ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವ ರೀತಿಯಲ್ಲಿಯೇ ಇಲ್ಲಿಯೂ ಅರೆಕಾಲಿಕ ವೈದ್ಯರು, ಸಿಬ್ಬಂದಿ ನೇಮಕವಾಗಬೇಕು. ಹಾಗಾದರೆ ಮಾತ್ರ ನಮ್ಮ ಮೇಲಿನ ಕೆಲಸದ ಹೊರೆ ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.

ವಾರದೊಳಗೆ ವರದಿ: ಜಿಪಂ ಸಿಇಓ ಪ್ರಶಾಂತ್‍ಕುಮಾರ್ ಮಿಶ್ರ ಮೇಲೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ತನಿಖೆ ನಡೆಸಿ 7 ದಿನದೊಳಗೆ ವರದಿ ಕೊಡುವಂತೆ ಮುಖ್ಯಮಂತ್ರಿ ಸೂಚಿಸಿರುವ ರೀತಿಯಲ್ಲಿಯೇ ವಾರದೊಳಗೆ ವರದಿ ನೀಡಬೇಕು. ವರದಿ ಬರುವವರೆಗೆ ಕಪ್ಪು ಪಟ್ಟಿ ಧರಿಸಿ, ಕರ್ತವ್ಯ ನಿರ್ವಹಿಸಲಿದ್ದೇವೆ. ಆರು ತಿಂಗಳಿಂದ ಸತತವಾಗಿ ಕೋವಿಡ್ ಕೆಲಸ ನಿರ್ವಹಿಸಿದ್ದೇವೆ. ಆದರೆ ಅದು ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಗಬಾರದು. ಹೀಗಾಗಿ ಮಾನವೀಯ ದೃಷ್ಟಿಯಿಂದ ನಾವು ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ ಎಂದರು. ಭಾನುವಾರ ಬೆಳಿಗ್ಗೆ ಮೈಸೂರು ಡಿಹೆಚ್‍ಓ ಬಳಿ ಜಮಾಯಿಸಿದ ಮುಷ್ಕರನಿರತ ವೈದ್ಯರು ಮೂರನೇ ದಿನವೂ ಧರಣಿಯನ್ನು ಮುಂದುವರಿಸಿದ್ದರು. ಅಷ್ಟರಲ್ಲಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿ ಸಂಘದ ಸಂಘದ ನಿರ್ದೇಶನದ ಮೇರೆಗೆ ಧರಣಿಯನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದರು.

Translate »