ದಸರಾ ಉತ್ಸವಕ್ಕೆ ಗೊಂಬೆ ಪ್ರದರ್ಶನದ ಮೆರಗು
ಮೈಸೂರು

ದಸರಾ ಉತ್ಸವಕ್ಕೆ ಗೊಂಬೆ ಪ್ರದರ್ಶನದ ಮೆರಗು

October 19, 2021

ಮೈಸೂರು, ಅ.18(ಎಸ್‍ಪಿಎನ್)-ಕೋವಿಡ್ ಸಂದರ್ಭದಲ್ಲೂ ಮೈಸೂರು ಜನತೆ ದಸರಾ ಗೊಂಬೆಗಳನ್ನು ತಮ್ಮ ತಮ್ಮ ಮನೆಗಳಲ್ಲಿಟ್ಟು ದಸರಾ ಆಚರಣೆಗೆ ಮೆರಗು ನೀಡಿರುವುದು ಸ್ವಾಗತಾರ್ಹ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಮೈಸೂರು ಟಿ.ಕೆ.ಬಡಾವಣೆಯಲ್ಲಿರುವ ಶ್ರೀ ಕೃಷ್ಣಧಾಮದ ಆವರಣದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಪಾರಿ ತೋಷಕ ಹಾಗೂ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ದಸರಾ ಮಹೋತ್ಸವ ವನ್ನು ಇಲ್ಲಿನ ಪ್ರವಾಸೋದ್ಯಮದ ಭಾಗ ವಾಗಿ ಆಚರಿಸುತ್ತಿದೆ. ಮೈಸೂರಿಗೆ ಹೊಂದಿ ಕೊಂಡಿರುವ ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿ ದೃಷ್ಟಿಯಿಂದ ವಿಶೇಷ ಪ್ಯಾಕೇಜ್ ಮೂಲಕ ಜನರನ್ನು ಆಕರ್ಷಿ ಸಲು ಉತ್ತೇಜನ ನೀಡುತ್ತಿದೆ ಎಂದರು.

ನಂತರ ಧಾರ್ಮಿಕ ಮುಖಂಡರಾದ ಭಾನುಪ್ರಕಾಶ್ ಶರ್ಮಾ ಮಾತನಾಡಿ, ಹಿಂದಿನ ಕಾಲದಲ್ಲಿ ಕಾಶಿ, ಮಥುರಾ ಹಾಗೂ ರಾಮಾಯಣ, ಮಹಾಭಾರತ ಹಾಗೂ ದಸರಾ ಉತ್ಸವದ ಆಚರಣೆಗಳನ್ನು ನೋಡಲು ಸಾಧ್ಯವಾಗದವರಿಗೆ ತಮ್ಮ ಮನೆಗಳಲ್ಲೇ ಬೊಂಬೆಗಳನ್ನು ಜೋಡಿಸಿ, ಇದನ್ನು ಮಕ್ಕಳಿಗೆ ತೋರಿಸಿ ಆನಂದ ಪಡುತ್ತಿದ್ದರು. ಈ ಸಂಪ್ರದಾಯ ಈಗಲೂ ಮುಂದುವರೆದಿರುವುದು ಸಂತೋಷದ ಸಂಗತಿ. ದಸರಾ ಸಂದರ್ಭದಲ್ಲಿ ದಸರಾ ಗೊಂಬೆಗಳನ್ನು ಅಂದವಾಗಿ ಜೋಡಿಸಲು ಸಂಘ-ಸಂಸ್ಥೆಗಳು ಸ್ಪರ್ಧೆಗಳ ಮೂಲಕ ಉತ್ತೇಜಿಸುತ್ತಿರುವುದು ಉತ್ತಮ ಬೆಳ ವಣಿಗೆ ಎಂದರು.

ಬಹುಮಾನ ವಿತರಣೆ: ದಸರಾ ಹಿನ್ನೆಲೆ ಯಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಕೂರಿ ಸುವ ಸ್ಪರ್ಧೆಯಲ್ಲಿ ಕುವೆಂಪುನಗರದ ನಿವಾಸಿ ಇಂದಿರಾ ಶಂಕರ್ ಪ್ರಥಮ, ಕನಕದಾಸನಗರದ ನಿವಾಸಿ ಎಸ್. ವರ್ಷ ಅವರಿಗೆ ದ್ವಿತೀಯ, ದಟ್ಟಗಳ್ಳಿ ನಿವಾಸಿ ರಾಣಿ ನಾಗಭೂಷಣ್ ತೃತೀಯ ಬಹುಮಾನ ವಿತರಿಸಲಾಯಿತು. ಇನ್ನು ಳಿದ 89 ಸ್ಪರ್ಧೆಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ವಿಪ್ರಮುಖಂಡ ಕೆ.ರಘುರಾಂ ವಾಜಪೇಯಿ, ನಗರ ಪಾಲಿಕೆ ಸದಸ್ಯೆ ಲಕ್ಷ್ಮೀ ಕಿರಣ್ ಗೌಡ, ಮುಖಂಡರಾದ ಮಹೇಂದ್ರ ಸಿಂಗ್ ಕಾಳಪ್ಪ, ಶಿಕ್ಷಕ ಜಿ.ವಿ. ರವಿಶಂಕರ್, ಕೃಷ್ಣಧಾಮ ಉಪಾಧ್ಯಕ್ಷ ಮೋಹನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ರೇಣುಕಾ ರಾಜ, ಮೃಗಾಲಯ ಪ್ರಾಧಿಕಾರದ ಜ್ಯೋತಿ ರಚನಾ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಗಿರೀಶ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಸುಚೇಂದ್ರ, ಚಕ್ರಪಾಣಿ, ನವೀನ್ ಕೆಂಪಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »