ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಜೀವ ಉಳಿಸುವಂತೆ ಮನವಿ
ಮೈಸೂರು

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಜೀವ ಉಳಿಸುವಂತೆ ಮನವಿ

June 14, 2021

ಮೈಸೂರು ಜಿಲ್ಲೆಯಲ್ಲಿ ದಿನಕ್ಕೆ 150ರಿಂದ 200 ಯೂನಿಟ್ ರಕ್ತದ ಬೇಡಿಕೆ
ಮೈಸೂರು, ಜೂ.13(ಎಂಟಿವೈ)-ಕೊರೊನಾ ಹಾವಳಿ ಹಾಗೂ ಲಸಿಕೆ ಪಡೆದುಕೊಳ್ಳುವ ಅಭಿಯಾನದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿನ ಎಲ್ಲಾ ಬ್ಲಡ್ ಬ್ಯಾಂಕ್‍ಗಳು ಖಾಲಿ ಯಾಗಿದ್ದು, ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ರಕ್ತದ ಕೊರತೆ ಉಂಟಾಗುತ್ತಿರುವ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜೀವಧಾರ ರಕ್ತನಿಧಿಯ ನಿರ್ದೇಶಕ ಎಸ್.ಇ.ಗಿರೀಶ್ ವಿಷಾದಿಸಿದ್ದಾರೆ. ಮೆಗಾ ರಕ್ತದಾನ ಶಿಬಿರದ ವೇಳೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಪ್ರತೀ ದಿನ 150ರಿಂದ 200 ಯೂನಿಟ್ ರಕ್ತದ ಬೇಡಿಕೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ 9 ರಕ್ತನಿಧಿ (ಬ್ಲಡ್ ಬ್ಯಾಂಕ್)ಗಳಿದ್ದು, ಪ್ರಸ್ತುತ ಕೆ.ಆರ್.ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಹೊರತುಪಡಿಸಿದರೆ, ಉಳಿದ ಎಲ್ಲಾ ರಕ್ತನಿಧಿ ಕೇಂದ್ರದಲ್ಲೂ ದಾಸ್ತಾನಿನ ಕೊರತೆ ಉಂಟಾಗಿದೆ. ಹೆರಿಗೆ, ವಿವಿಧ ಶಸ್ತ್ರ ಚಿಕಿತ್ಸೆ, ಅಪಘಾತಕ್ಕೀಡಾದ ರೋಗಿಗಳಿಗೆ ಚಿಕಿತ್ಸೆ ವೇಳೆ ರಕ್ತದ ಅವಶ್ಯಕತೆ ಇದ್ದು, ರೋಗಿಗಳ ಪೋಷಕರು, ರಕ್ತಕ್ಕಾಗಿ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತೀ ದಿನ 35ರಿಂದ 40 ಮಂದಿ ಬ್ಲಡ್ ಬ್ಯಾಂಕ್‍ಗೆ ಬಂದು 1 ಯೂನಿಟ್ ರಕ್ತ ನೀಡಿ ಎಂದು ಬೇಡುವಂತಾಗಿದೆ ಎಂದರು. ಜಿಲ್ಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಸೌಲಭ್ಯವುಳ್ಳ 70 ಆಸ್ಪತ್ರೆಗಳಿವೆ. ಈ ಎಲ್ಲಾ ಆಸ್ಪತ್ರೆಗಳಲ್ಲೂ ಗಂಭೀರ ಸ್ಥಿತಿಯಲ್ಲಿ ರುವ ರೋಗಿಗಳು ದಾಖಲಾಗಿದ್ದಾರೆ. ಅಂತಹವರಿಗೆ ರಕ್ತದ ಅವಶ್ಯಕತೆ ತುಂಬಾ ಇದೆ. ಕೊರೊನಾ ಹಿನ್ನೆಲೆ ದಾನಿಗಳು ಮುಂದೆ ಬರುತ್ತಿಲ್ಲ. ಅಲ್ಲದೇ ಲಸಿಕೆ ಪಡೆದ ನಂತರ ನಿರ್ದಿಷ್ಟ ಅವಧಿವರೆಗೆ ರಕ್ತದಾನ ಮಾಡುವಂತಿಲ್ಲ. ಈಗಾಗಲೇ 18ರಿಂದ 44 ವರ್ಷದೊಳಗಿನವರಿಗೆ ಜೂ.21ರಿಂದ ಉಚಿತವಾಗಿ ಲಸಿಕೆ ಹಾಕುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಲಸಿಕೆ ತೆಗೆದುಕೊಳ್ಳುವ ಮುನ್ನ ರಕ್ತದಾನ ಮಾಡುವುದಕ್ಕೆ ಮುಂದಾಗಬೇಕು. ಇದರಿಂದ ಸಾಕಷ್ಟು ಮಂದಿಯ ಜೀವ ಉಳಿಸಿದಂತಾಗುತ್ತದೆ. ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಇಂದು 7 ಸ್ಥಳಗಳಲ್ಲಿ ಪ್ರತ್ಯೇಕವಾಗಿ ಮೆಗಾ ರಕ್ತದಾನ ಶಿಬಿರ ಆಯೋಜಿಸಿದ್ದು, 18ರಿಂದ 44 ವರ್ಷ ವಯೋಮಾನದ ಆರೋಗ್ಯವಂತರು ರಕ್ತದಾನ ಮಾಡಬೇಕು. ಈ ಹಿಂದೆ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿ ಎ ಮತ್ತು ಓ ಪಾಸಿಟಿವ್ ರಕ್ತದ ದಾಸ್ತಾನು ಇರುತ್ತಿತ್ತು. ಈಗ ಯಾವುದೇ ಗುಂಪಿನ ರಕ್ತವೂ ಸಿಗುತ್ತಿಲ್ಲ. ಬದಲಾವಣೆ ಮಾಡಿಕೊಳ್ಳುವುದಕ್ಕೂ ರಕ್ತದ ಲಭ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯವಂತರು ರಕ್ತದಾನ ಮಾಡಿ ಹೆರಿಗೆ ಸೇರಿದಂತೆ ವಿವಿಧ ಕಾರಣಗಳಿಗೆ ಆಸ್ಪತ್ರೆಗೆ ದಾಖಲಾಗಿರುವವರ ಜೀವ ಉಳಿಸುವಂತೆ ಕೋರಿದರು.

Translate »