ದೋಸ್ತಿ ಕ್ಲೈಮ್ಯಾಕ್ಸ್: ಕೊನೆ ಘಳಿಗೆ ಪ್ರಯತ್ನ ಪವಾಡ ಸದೃಶ ಫಲ ನೀಡಬಹುದೇ…!?
ಮೈಸೂರು

ದೋಸ್ತಿ ಕ್ಲೈಮ್ಯಾಕ್ಸ್: ಕೊನೆ ಘಳಿಗೆ ಪ್ರಯತ್ನ ಪವಾಡ ಸದೃಶ ಫಲ ನೀಡಬಹುದೇ…!?

July 18, 2019

ಬೆಂಗಳೂರು: ಶಾಸಕರ ರಾಜೀ ನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗುವಂತೆ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಆದೇಶ ನೀಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ.

ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕೋ ಅನರ್ಹಗೊಳಿಸಬೇಕೋ ಎಂಬ ಕುರಿತು ನಿಮ್ಮ ಕಾಲಮಿತಿ ಯಲ್ಲಿ ನೀವು ನಿರ್ಧಾರ ತೆಗೆದುಕೊಳ್ಳಿ. ಆದರೆ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗ ಬೇಕೆಂದು ಒತ್ತಾಯಿಸಬೇಡಿ ಎಂದು ಸ್ಪೀಕರ್ ಅವರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಅಲ್ಲಿಗೆ ಸುಮಾರು ಹದಿನಾಲ್ಕು ತಿಂಗಳ ಕುಮಾರಸ್ವಾಮಿ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದ್ದು ಇದಕ್ಕಾಗಿ ಕ್ಷಣಗಣನೆ ಆರಂಭ ವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಟ್ಟು ಉಪಮುಖ್ಯಮಂತ್ರಿ ಪಟ್ಟ ವನ್ನು ನಾವಿಟ್ಟುಕೊಳ್ಳುತ್ತೇವೆ ಎಂಬ ಒಪ್ಪಂದಕ್ಕೆ ಜೆಡಿಎಸ್ ನಾಯಕರು ಒಪ್ಪಿಗೆ ನೀಡದಿದ್ದರೆ ಸರ್ಕಾರ ಪತನವಾ ಗುವುದು ಬಹುತೇಕ ನಿಶ್ಚಿತ. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆ ಬೇರೆ

ಒಳಒಪ್ಪಂದಗಳನ್ನು ಮಾಡಿಕೊಳ್ಳಲು ಜೆಡಿಎಸ್ ಯಶಸ್ವಿಯಾದರೂ ಸರ್ಕಾರ ಉಳಿಯುತ್ತದೆ. ಇಲ್ಲದಿದ್ದರೆ ಈ ಸರ್ಕಾರ ಉಳಿಯಲು ಬೇರೆ ಕಾರಣಗಳೇ ಇಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಶಾಸಕರ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಈ ಶಾಸಕರು ಮರಳಿ ಬಂದು ವಿಶ್ವಾಸಮತ ಯಾಚನೆಗೆ ಬೆಂಬಲ ನೀಡದಿದ್ದರೆ ಸರ್ಕಾರದ ಮುಂದೆ ಬೇರೆ ಮಾರ್ಗಗಳಿಲ್ಲ. ಆದರೆ ಇದು ಸಾಧ್ಯವಾಗುವುದು ಕೇವಲ ಸಿದ್ದರಾಮಯ್ಯ ಅವರ ನಿರ್ಧಾರದಿಂದ ಮಾತ್ರ ಎಂದಿರುವ ಮೂಲಗಳು, ಉಳಿದಂತೆ ಶಾಸಕರು ಸದನಕ್ಕೆ
ಹಾಜರಾಗದಿದ್ದರೂ ಸರ್ಕಾರ ಉರುಳುತ್ತದೆ. ಹಾಗಾಗದೆ ಅವರನ್ನು ಅನರ್ಹಗೊಳಿ ಸಿದರೂ ಸರ್ಕಾರ ನಿಶ್ಚಿತವಾಗಿ ಉರುಳುತ್ತದೆ. ಅಂದ ಹಾಗೆ ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಇಂದು ಬೆಳಿಗ್ಗೆ 10.30ಕ್ಕೆ ಮಧ್ಯಂತರ ಆದೇಶ ನೀಡಿ ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಏನಾದರೂ ಕ್ರಮ ಕೈಗೊಳ್ಳಿ. ಆದರೆ ಯಾವ ಕಾರಣಕ್ಕೂ ಸದನಕ್ಕೆ ಕಡ್ಡಾಯವಾಗಿ ಬರುವಂತೆ ಶಾಸಕರಿಗೆ ಸೂಚಿಸಬೇಡಿ ಎಂದು ಸ್ಪೀಕರ್ ಅವರಿಗೆ ಸೂಚಿಸಿದೆ.

ಹೀಗೆ ಅತೃಪ್ತ ಶಾಸಕರ ರಾಜೀನಾಮೆ ವಿಷಯದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಮತ್ತೊಂದೆಡೆ ಬಿರುಸಿನ ಚಟುವಟಿಕೆಗಳು ಆರಂಭವಾದವು. ಮುಂದೇನು ಮಾಡಬೇಕು ಎಂಬ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ತಂದೆ ದೇವೇಗೌಡರಿಂದ ಹಿಡಿದು ಕಾನೂನು ತಜ್ಞರವರೆಗೆ ಹಲವ ರೊಂದಿಗೆ ಚರ್ಚಿಸಿದರು. ಇದೇ ಕಾಲಕ್ಕೆ ದೊಮ್ಮಲೂರಿನ ಹೋಟೆಲ್ ಹಿಲ್ಟನ್‍ನಲ್ಲಿ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿದರು. ಈ ಮಧ್ಯೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್‍ಕುಮಾರ್, ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿ ಹೆಜ್ಜೆ ಇಡುವುದಾಗಿ ಹೇಳಿದರು. ಸುಪ್ರೀಂಕೋರ್ಟ್ ನನ್ನ ಹಕ್ಕಿಗೆ ಶಕ್ತಿ ನೀಡಿದೆ. ನಾನು ಯಾರ ಪರವಾಗಿಯೂ ಕೆಲಸ ಮಾಡುವುದಿಲ್ಲ. ಸಂವಿಧಾನದ ಪರವಾಗಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅತೃಪ್ತ ಶಾಸಕರು ಇಂದು ಕೂಡಾ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರಲ್ಲದೆ, ನಮ್ಮ ರಾಜೀನಾಮೆಯನ್ನು ಸ್ಪೀಕರ್ ಅಂಗೀ ಕರಿಸಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದ್ದು, ನಾಳೆ ಬೆಳಿಗ್ಗೆಯ ಒಳಗೆ ಏನಾದರೂ ಒಳಸಂಧಾನಗಳು ನಡೆದು ಯಶಸ್ವಿಯಾಗದಿದ್ದರೆ ಮೈತ್ರಿ ಸರ್ಕಾರ ಪತನವಾಗುವುದು ಬಹುತೇಕ ನಿಶ್ಚಿತ.

Translate »