ಈ ಬಾರಿ ದಸರಾ ಉದ್ಘಾಟನೆಗೆ ಡಾ.ಸಿ.ಎನ್.ಮಂಜುನಾಥ್ ಆಯ್ಕೆ?
ಮೈಸೂರು

ಈ ಬಾರಿ ದಸರಾ ಉದ್ಘಾಟನೆಗೆ ಡಾ.ಸಿ.ಎನ್.ಮಂಜುನಾಥ್ ಆಯ್ಕೆ?

September 10, 2020

ಬೆಂಗಳೂರು, ಸೆ.9-ಈ ಬಾರಿಯ ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರು ಹಾಗೂ ಕೊರೊನಾ ನಿಯಂತ್ರಣ ಸಂಬಂಧ ರಾಜ್ಯದಲ್ಲಿ ರಚನೆಯಾಗಿರುವ ಟಾಸ್ಕ್‍ಫೋರ್ಸ್ ಸದಸ್ಯರೂ ಆದ ಡಾ. ಸಿ.ಎನ್.ಮಂಜುನಾಥ್‍ರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಕೊರೊನಾ ಸೋಂಕು ತಡೆಗೆ ಅವಿರತ ಶ್ರಮಿಸುತ್ತಿರುವ, ಕೊರೊನಾ ವಾರಿಯರ್ಸ್ ಬಗ್ಗೆ ಅತೀವ ಗೌರವವುಳ್ಳ ಮೈಸೂರು ಉಸ್ತು ವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್, ಅವರ ಪ್ರತಿನಿಧಿಯಾಗಿ ಡಾ. ಮಂಜುನಾಥ್ ಆಯ್ಕೆಗೆ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಪ್ರಸಿದ್ಧ ಮೈಸೂರು ದಸರಾವನ್ನು ಚಾಮುಂಡಿಬೆಟ್ಟ ಹಾಗೂ ಮೈಸೂರು ಅರಮನೆಗೆ ಸೀಮಿತವಾಗಿ ಸರಳವಾಗಿ ಆಚರಿ ಸಲು ಮಂಗಳವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕೊರೊನಾಗೆ ಕಡಿವಾಣ ಹಾಕಲು ಅವಿರತ ಶ್ರಮಿ ಸುತ್ತಿರುವ ವೈದ್ಯರು, ನರ್ಸ್‍ಗಳು, ಪೊಲೀಸರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಇನ್ನಿತರ ಇಲಾಖೆಗಳ ಸಿಬ್ಬಂದಿಯನ್ನು ಒಳಗೊಂಡ ಕೊರೊನಾ ವಾರಿಯರ್ಸ್‍ಗೆ ಈ ಬಾರಿಯ ದಸರಾದಲ್ಲಿ ಮೇರು ಸ್ಥಾನ ಕಲ್ಪಿಸಲು, ಅವರನ್ನು ಗೌರವಿಸಲು ನಿರ್ಧರಿಸಲಾಗಿದೆ.

ಆದರೆ ಪರಂಪರಾಗತವಾಗಿ ನಡೆದು ಬಂದಿರುವಂತೆ ವಿಧ್ಯುಕ್ತವಾಗಿ ದಸರಾವನ್ನು ಒಬ್ಬರೇ ಉದ್ಘಾಟಿಸಬೇಕಾ ಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಉತ್ಸವವನ್ನು, ಲಕ್ಷಾಂತರ ಹೃದ್ರೋಗಿಗಳಿಗೆ ಚಿಕಿತ್ಸೆ ಕಲ್ಪಿಸುವ ಮೂಲಕ ದೇಶ-ವಿದೇಶದಲ್ಲಿ ಪ್ರಸಿದ್ಧರಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಾರಿಯ ದಸರಾ ಉದ್ಘಾಟನೆಗೆ ಕೊರೊನಾ ವಾರಿಯರ್ಸ್‍ಗಳಲ್ಲಿ ಅನೇಕ ಹೆಸರುಗಳು ಪ್ರಸ್ತಾಪವಾದವು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇ ಶಕರಾದ ಡಾ.ಸಿ.ಎನ್.ಮಂಜುನಾಥ್ ಅವರ ಮೂಲಕ ದಸರಾ ಉದ್ಘಾಟನೆ ಮಾಡಿಸುವುದು ಸೂಕ್ತವೆಂದು ಪ್ರಸ್ತಾಪ ವನ್ನು ಮುಂದಿಟ್ಟರು. ಇದಕ್ಕೆ ಶಾಸಕರಾದ ಜಿ.ಟಿ.ದೇವೇ ಗೌಡ, ಹೆಚ್.ವಿಶ್ವನಾಥ್, ಎಲ್.ನಾಗೇಂದ್ರ ಇನ್ನಿತರರು ಸಹಮತ ವ್ಯಕ್ತಪಡಿಸಿದ್ದಾರೆ.

ಡಾ. ಮಂಜುನಾಥ್ ಲಕ್ಷಾಂತರ ಬಡ ಹೃದ್ರೋಗಿಗಳಿಗೆ ಚಿಕಿತ್ಸೆ ಕಲ್ಪಿಸುವ ಮೂಲಕ ಅವರಿಗೆ ಮರುಜೀವ ಕಲ್ಪಿಸಿದ್ದಾರೆ. ತಮ್ಮ ಸೇವಾ ಶ್ರೇಷ್ಠತೆ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಪ್ರಯತ್ನದ ಫಲವಾಗಿ ಬೆಂಗಳೂರು, ಮೈಸೂರು ಅಲ್ಲದೇ ಉತ್ತರ ಕರ್ನಾಟಕದಲ್ಲೂ ಸುಸಜ್ಜಿತ ಹೃದ್ರೋಗ ಆಸ್ಪತ್ರೆಗಳು ಸ್ಥಾಪನೆಯಾಗುತ್ತಿವೆ. ಆ ಮೂಲಕ ಬಡ ಹೃದ್ರೋಗಿಗಳಿಗೆ ಅನುಕೂಲವಾದಂತಾಗಿದೆ ಎಂದು ತಮ್ಮ ಪ್ರಸ್ತಾಪವನ್ನು ಪ್ರತಾಪ್ ಸಿಂಹ ಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಕೊರೊನಾ ವಾರಿಯರ್ಸ್‍ಗೆ ಈ ಬಾರಿಯ ದಸರಾ ಉದ್ಘಾಟನೆ ಸಂದರ್ಭದಲ್ಲಿ ಮೇರು ಸ್ಥಾನ ಕಲ್ಪಿಸಿ, ಅವರಲ್ಲಿ ತಲಾ ಒಬ್ಬರನ್ನು ಆಯ್ಕೆ ಮಾಡಿ, ಅಭಿನಂದಿಸುವುದು, ಹಾಗೆಯೇ ಕೊರೊನಾ ವಾರಿಯರ್ಸ್ ಪ್ರತಿನಿಧಿಯಾಗಿ ಡಾ. ಸಿ.ಎನ್.ಮಂಜುನಾಥ್ ಅವರಿಂದ ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುವುದು ಖಚಿತವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಸಂಬಂಧ ಮುಂದಿನ ಶನಿವಾರ ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆಯಲಿರುವ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು, ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Translate »