ದಸರಾ ಗಜಪಡೆ ಆಯ್ಕೆಗೆ ಅರಣ್ಯ ಇಲಾಖೆ ಕಸರತ್ತು
ಮೈಸೂರು

ದಸರಾ ಗಜಪಡೆ ಆಯ್ಕೆಗೆ ಅರಣ್ಯ ಇಲಾಖೆ ಕಸರತ್ತು

September 10, 2020

ಮೈಸೂರು, ಸೆ.9(ಎಂಟಿವೈ)- ಕೊರೊನಾದಿಂದಾಗಿ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚ ರಣೆಗೆ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ಗಜಪಡೆ ಐವರು ಸದಸ್ಯರ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಬುಧವಾರ ಅಧಿಕಾರಿಗಳ ತಂಡ ವಿವಿಧ ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿ ಆನೆಗಳನ್ನು ಪರಿಶೀಲಿಸಿದೆ.

ದಸರಾ ಮಹೋತ್ಸವಕ್ಕೆ ಗಜಪಡೆ ಆಯ್ಕೆ, ಅವುಗಳ ಕಾಳಜಿ ಸೇರಿದಂತೆ ಆನೆಗಳ ಜವಾಬ್ದಾರಿ ಮೈಸೂರು ವನ್ಯ ಜೀವಿ ವಿಭಾಗಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಅಲೆಗ್ಸಾಂಡರ್ ಬುಧವಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶುವೈದ್ಯ ಡಾ.ಮುಜೀಬ್ ಹಾಗೂ ಇತರೆ ಸಿಬ್ಬಂದಿಯೊಂದಿಗೆ ಮತ್ತಿಗೂಡು, ಆನೆಕಾಡು, ದುಬಾರೆ ಆನೆ ಶಿಬಿರಕ್ಕೆ ಹೋಗಿ ದಸರಾ ಆನೆಗಳ ಆರೋಗ್ಯ ಸ್ಥಿತಿಗತಿ ಪರಿಶೀಲಿಸಿದರು. ಕಳೆದ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ 60 ವರ್ಷ ದಾಟಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿ ಅಂಬಾರಿಯ ಭಾರ ಹೊರಿಸದೇ ಇರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಹೆಗಲಿಗೆ ವರ್ಗಾಯಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಡಿಸಿಎಫ್ ಅಲೆಗ್ಸಾಂಡರ್ ನೇತೃತ್ವದ ತಂಡ ಮತ್ತಿಗೂಡು ಆನೆ ಶಿಬಿರಕ್ಕೆ ತೆರಳಿ ಅಭಿಮನ್ಯು(53)ವಿನ ಆರೋಗ್ಯ, ಸ್ವಭಾವ ಹಾಗೂ ಮದ ಬಂದಿದೆಯಾ? ಎನ್ನುವುದನ್ನು ಪರಿಶೀಲಿಸಿತು. ಬಳಿಕ ಆನೆಕಾಡು ಕ್ಯಾಂಪ್‍ನಲ್ಲಿರುವ ಪಟ್ಟದ ಆನೆ ವಿಕ್ರಮ, ಕುಮ್ಕಿ ಆನೆ ವಿಜಯ, ದುಬಾರೆ ಕ್ಯಾಂಪ್‍ನಲ್ಲಿರುವ ಗೋಪಿ ಹಾಗೂ ಮತ್ತೊಂದು ಕುಮ್ಕಿ ಆನೆ ಕಾವೇರಿಯನ್ನು ಆರೋಗ್ಯ ಪರಿಶೀಲಿಸಿದರು. ನಾಳೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ರಾಂಪುರ ಕ್ಯಾಂಪ್, ಅರ್ಜುನ ಇರುವ ಬಳ್ಳೆ ಕ್ಯಾಂಪ್‍ಗೆ ತೆರಳಿ ಆನೆಗಳ ಆರೋಗ್ಯ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಈ ಬಾರಿ ಜಂಬೂಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಿರುವುದರಿಂದ 5 ಅಥವಾ 6 ಆನೆಗಳನ್ನಷ್ಟೇ ಮೈಸೂರಿಗೆ ಕರೆತರಲು ನಿರ್ಧರಿಸಲಾಗಿದೆ.

ಈ ಬಗ್ಗೆ `ಮೈಸೂರು ಮಿತ್ರ’ನೊಂದಿಗೆ ಡಿಸಿಎಫ್ ಅಲೆಗ್ಸಾಂಡರ್ ಮಾತನಾಡಿ, ಇಂದು 3 ಆನೆ ಕ್ಯಾಂಪ್‍ಗಳಿಗೆ ತೆರಳಿ 5 ಆನೆಗಳ ಆರೋಗ್ಯ ಹಾಗೂ ಸ್ಥಿತಿಗತಿ ಪರಿಶೀಲಿಸಲಾಗಿದೆ. 5 ಆನೆಗಳು ಆರೋಗ್ಯದಿಂದ ಇದ್ದು, ದಸರೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅರ್ಹವಾಗಿವೆ. ನಾಳೆ ಇನ್ನೆರಡು ಆನೆ ಕ್ಯಾಂಪ್‍ಗೆ ತೆರಳಿ ಮತ್ತಷ್ಟು ಆನೆಗಳನ್ನು ಪರಿಶೀಲಿಸಿ ಪಟ್ಟಿ ತಯಾರಿಸಲಾಗುವುದು. ಇನ್ನೆರಡು ದಿನದಲ್ಲಿ ನಡೆಯುವ ಸಭೆಯಲ್ಲಿ ಆನೆಗಳ ಅಂತಿಮ ಪಟ್ಟಿ ನಿರ್ಧಾರವಾಗಲಿದೆ ಎಂದರು.

 

 

 

Translate »