ಉನ್ನತ ಮಟ್ಟದ ಸಮಿತಿಗೆ ಸಂಸದ ಪ್ರತಾಪ್‍ಸಿಂಹ ಸಲಹೆ
ಮೈಸೂರು, ಸೆ.10(ಆರ್‍ಕೆಬಿ)- ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್. ಮಂಜುನಾಥ್ ಅವರಿಂದ ಮಾಡಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ದಸರಾ ಉನ್ನತ ಸಮಿತಿ ಸಭೆಯಲ್ಲಿ ತಿಳಿಸಿ ದ್ದಾಗಿ ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ತಿಳಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ದಸರಾ ಉದ್ಘಾಟನೆಗೆ ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರ ಹೆಸರು ಕೇಳಿಬಂದಿವೆ. ಪೊಲೀಸ್ ಇಲಾಖೆಗೂ ಅವಕಾಶ ನೀಡುವಂತೆ ಸಭೆಯಲ್ಲಿ ಸಲಹೆ ನೀಡಿದ್ದೆ. ಅದರಂತೆ ಉದ್ಘಾಟನೆ ಸಂದರ್ಭ ಈ ಐದೂ ಇಲಾಖೆಗಳ ವಾರಿಯರ್ಸ್‍ಗಳನ್ನು ಕರೆದು ಸನ್ಮಾನಿಸಲು ಮುಖ್ಯ ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ದಸರಾ ಉದ್ಘಾಟನಾ ಭಾಷಣಕ್ಕೆ ಒಬ್ಬರಿಗೆ ಮಾತ್ರ ಅವಕಾಶ ವಿದ್ದು, ಅದನ್ನು ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಅವರಿಗೆ ನೀಡುವಂತೆ ತಾವು ಸಲಹೆ ನೀಡಿರುವುದಾಗಿ ತಿಳಿಸಿದರು.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶುಕ್ರವಾರ ಮತ್ತೊಂದು ಸಭೆ ನಡೆಯಲಿದ್ದು, ಈ ವಾರಿಯರ್ಸ್ ಗಳ ಪೈಕಿ ಯಾರನ್ನು ಆಯ್ಕೆ ಮಾಡುವುದು ಎಂಬುದೇ ಸವಾಲಾಗಿದೆ ಎಂದರು.
ಜಮೀರ್ ಹೆಸರಿದ್ದರೂ ಬಂಧಿಸಿಲ್ಲವೇಕೆ?: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿಚಾರದಲ್ಲಿ ಪ್ರಶಾಂತ್ ಸಂಬರಗಿ ಹೇಳಿರುವ ಹಲವರ ಹೆಸರಿನ ಪಟ್ಟಿಯಲ್ಲಿ ಶಾಸಕ ಜಮೀರ್ ಅಹಮದ್ ಹೆಸರೂ ಇದೆ. ಆದರೂ ಪೊಲೀಸರು ಅವರನ್ನು ಬಂಧಿಸಿಲ್ಲವೇಕೆ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು. ತನಿಖಾಧಿಕಾರಿಗಳಿಗೆ ಪ್ರಶಾಂತ್ ಸಂಬರಗಿ ಆರೋಪಗಳ ಮೇಲೆ ಅನುಮಾನವಿದ್ದರೆ ಅವರನ್ನೂ ತನಿಖೆಗೆ ಒಳಪಡಿಸಲಿ. ಅವರ ಆರೋಪಕ್ಕೆ ಪೂರಕ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಲಿ ಎಂದು ಹೇಳಿದರು.
ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರೆಯುವುದು ಸಹಜ. ಆದರೆ ಗೃಹಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ವಿಶ್ವಾಸವಿದೆ ಎಂದರು.