ಸರ್ವ ಕಾಲಕ್ಕೂ ಪುಸ್ತಕ ಸಂಸ್ಕೃತಿ ಪುನರುತ್ಥಾನವಾಗಲಿ
ಹಾಸನ

ಸರ್ವ ಕಾಲಕ್ಕೂ ಪುಸ್ತಕ ಸಂಸ್ಕೃತಿ ಪುನರುತ್ಥಾನವಾಗಲಿ

June 26, 2018

ಶ್ರವಣಬೆಳಗೊಳ: ಮೂರ್ತ ಸಂಸ್ಕೃತಿ ಯಾಗಿರುವ ಪುಸ್ತಕಗಳು ಇಂದು ಅವನತಿಯಲ್ಲಿದ್ದು, ತತ್ಸಮಾನವಾಗಿ ವಿದ್ಯುನ್ಮಾನ ಮಾಧ್ಯಮಗಳಿದ್ದರೂ ಸರ್ವ ಕಾಲಕ್ಕೂ ಪುಸ್ತಕ ಸಂಸ್ಕೃತಿ ಪುನರುತ್ಥಾನ ವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ ಆಶಯ ವ್ಯಕ್ತಪಡಿಸಿದರು.

ಅವರು ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ನಡೆದ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಜನತೆ ಪುಸ್ತಕವನ್ನು ಮುಟ್ಟಬೇಕು, ಮೇಯಬೇಕು ನಂತರ ಜೀರ್ಣಿಸಿ ಕೊಳ್ಳಬೇಕೆಂದು ಎಂದು ಸಲಹೆ ನೀಡಿದರು.

ಪುಸ್ತಕ ಪ್ರೀತಿಗಿಂತಲೂ ಮುಂಚಿತವಾಗಿ ಸಂಸ್ಕೃತಿ ಯನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಬೇರು ಹಳಗನ್ನಡದಲ್ಲಿರುವುದರಿಂದ ಹಳಗನ್ನಡವನ್ನು ಅಭ್ಯಾಸ ಮಾಡಬೇಕು. ಹಳಗನ್ನಡದ ವ್ಯಾಪ್ತಿ ಬಹಳ ವಿಶಾಲ ವಾಗಿದೆ. ಹಳಗನ್ನಡ ಹಾಗೂ ನಡುಗನ್ನ ಡದ ಪದ್ಯಗಳ ಗದ್ಯಾನುವಾದ ಪುನರ ಮುದ್ರಣವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ತೀರ್ಥಂಕರರಿಗೆ ನೀಡುವಷ್ಟೇ ಗೌರವನ್ನು ಶಾಸ್ತ್ರ ಗ್ರಂಥಗಳಿಗೂ ನೀಡುತ್ತಾ ಬಂದಿದ್ದೇವೆ. ಆದ್ದರಿಂದ ಇಂದಿನ ಉದ್ಘಾಟನೆಗೆ ಬೆಳ್ಳಿ ತೊಟ್ಟಿಲಿನಲ್ಲಿ ಮೆರವಣಿಗೆ ಮಾಡುತ್ತಾ ಪಂಪನ ಆದಿಪುರಾಣದ ಹಸ್ತಪ್ರತಿ ಹಾಗೂ ಹೊಸಗನ್ನಡಕ್ಕೆ ತರ್ಜುಮೆಯಾಗಿರುವ ಪುಸ್ತಕವನ್ನು ತಂದು ಪೂಜಿಸಲಾಗುತ್ತಿದೆ ಎಂದರು.
ಹಿರಿಯ ಸಾಹಿತಿ ಪ್ರೊ.. ಚಂದ್ರಶೇಖರ ಪಾಟೀಲ್ ಮಾತನಾಡಿ, ಇಂದು ಕನ್ನಡದ ಪ್ರಸ್ತುತತೆ ಏನು ಎಂಬುದೇ ಪ್ರಶ್ನೆಯ ವಿಷಯವಾಗಿದ್ದು, ಮಾತೃ ಭಾಷೆ ನಮ್ಮ ಬದುಕಿನಿಂದ ದೂರವಾಗುವ ಪರಿಸ್ಥಿತಿ ಬಂದಿದೆ. ಹಳಗನ್ನಡ ನಡುಗನ್ನಡ ಹೊಸಗನ್ನಡ ಎಂಬುದು ಆಯಾ ಕಾಲದ ಸೂಚಕ ಪದಗಳಾ ಗಿದ್ದು, ಅವುಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸಿ ಕೊಳ್ಳುತ್ತಿದ್ದೇವೆ. ಇಂದಿನ ಕ್ರಿಯಾಶೀಲ ಬರಹ ಗಾರರಿಗೆ ಹಳಗನ್ನಡ ಓದುವ ಅವಶ್ಯಕತೆ ಯಿಲ್ಲ ಎನ್ನುತ್ತಾರೆ. ಆದರೆ ಯಾವುದೇ ದೇಶದ ಸಾಹಿತ್ಯ ವನ್ನು ತಿಳಿಯ ಬೇಕಾದರೆ ಇತಿಹಾಸ ಅಧ್ಯಯನ ಮಾಡಬೇಕಾಗುತ್ತದೆ ಎಂದರು.

ನಾಡೋಜ ಡಾ.ಹಂಪ ನಾಗರಾಜಯ್ಯ ಆಶಯ ನುಡಿಯನ್ನಾಡುತ್ತಾ, ಹಳಗನ್ನಡ ಕೊರಳು ಭಾಷೆಯಾಗದೇ ಕರಳು ಭಾಷೆ ಯಾಗಬೇಕು. ದಿನ ನಿತ್ಯದ ಹಳಗನ್ನಡದ ಸೊಲ್ಲುಗಳು ಕಳೆದು ಹೋಗುತ್ತಿವೆ. ಹಳಗನ್ನಡ ಸಾಹಿತ್ಯವನ್ನು ಆಸಕ್ತಿ ಯಿಂದ ಓದುವವರು ಹಾಗೂ ಕಲಿಸುವವರ ಕೊರತೆ ಕಾಲೇಜುಗಳಲ್ಲೂ ವಿವಿಗಳಲ್ಲೂ ಹೆಚ್ಚು ತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಮನು ಬಳಿಗಾರ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜದವರು ನಾಡಗೀತೆಯನ್ನು, ಹಳಗನ್ನಡ ಪದ್ಯವನ್ನು ಸೌಮ್ಯ ಸರ್ವೇಶ್ ಜೈನ್ ಹಾಡಿದರು. ಪ್ರೊ.. ಮಲ್ಲೇಪುರಂ ಜಿ.ವೆಂಕಟೇಶ್, ಶಾಸಕ ಸಿ.ಎನ್.ಬಾಲಕೃಷ್ಣ ಉಪಸ್ಥಿರಿದ್ದರು.

Translate »