ಕೆ.ಎಸ್.ಆರ್.ಟಿ.ಸಿ  ಬಸ್ ಮೇಲೆ ಆನೆ ದಾಳಿ
ಚಾಮರಾಜನಗರ

ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಆನೆ ದಾಳಿ

June 26, 2018
  • ಬಂಡೀಪುರ ಅರಣ್ಯದ ಮದ್ದೂರು ರೇಂಜ್‍ನಲ್ಲಿ ಘಟನೆ
  • ಮರಿಯಾನೆ ರಕ್ಷಿಸಲು ದಾಳಿಗೆ ಮುಂದಾದ ತಾಯಿ ಆನೆ

ಗುಂಡ್ಲುಪೇಟೆ: ಮರಿ ಯೊಂದಿಗೆ ಆನೆಗಳ ಹಿಂಡೊಂದು ರಸ್ತೆ ದಾಟುವ ವೇಳೆ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ತಾಯಿ ಆನೆ ಅಟ್ಟಾಡಿಸಿ ದಾಳಿ ನಡೆಸಲು ಮುಂದಾದ ಘಟನೆ ಮೈಸೂರು-ಸುಲ್ತಾನ್ ಬತೇರಿ ಮುಖ್ಯ ರಸ್ತೆಯ ಬಂಡೀಪುರ ಅರಣ್ಯದಲ್ಲಿ ನಡೆದಿದೆ.

ಕೇರಳದ ಕ್ಯಾಲಿಕಟ್‍ನಿಂದ ಗುಂಡ್ಲು ಪೇಟೆ, ಮೈಸೂರು ಮಾರ್ಗವಾಗಿ ಚಿಕ್ಕ ಮಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಸಂಜೆ 6.30ರಲ್ಲಿ ಕೇರಳದ ಗಡಿ ದಾಟಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬರುತ್ತಿ ದ್ದಾಗ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಸುಲ್ತಾನ್ ಬತೇರಿ ರಸ್ತೆಯಲ್ಲಿ ಬಂಡೀಪುರ ಅರಣ್ಯ ಪ್ರದೇಶದ ಮದ್ದೂರು ರೇಂಜ್‍ಗೆ ಸೇರಿದ ಆಲೇಗೌಡನ ಕಟ್ಟೆ ಬಳಿ ಮುಖ್ಯ ರಸ್ತೆಯನ್ನು ಆನೆಗಳ ಹಿಂಡು ದಾಟಲು ಮುಂದಾಗಿದೆ. ಈ ಹಿಂಡಿ ನಲ್ಲಿ ಎರಡರಿಂದ ಮೂರು ತಿಂಗಳ ಮರಿ ಯಿತ್ತು. ಆನೆಗಳ ಹಿಂಡು ರಸ್ತೆ ದಾಟು ತ್ತಿದ್ದುದ್ದನ್ನು ಕಂಡ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ಅನತಿ ದೂರದಲ್ಲಿಯೇ ನಿಲ್ಲಿಸಿದ್ದಾರೆ. ಈ ವೇಳೆ ಕ್ಯಾಲಿಕಟ್‍ನಿಂದ ಬಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ನ ಚಾಲಕ ಬಸ್‍ನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಸುಮಾರು 10 ನಿಮಿಷವಾದರೂ ಆನೆಗಳ ಹಿಂಡು ರಸ್ತೆ ದಾಟದೆ ಸುಮ್ಮನೆ ನಿಂತಿವೆ.

ಹಿಂಡಿನಲ್ಲಿದ್ದ ಮರಿಯಾನೆ ಡಾಂಬರ್ ರಸ್ತೆಯ ಮಧ್ಯ ಭಾಗದಲ್ಲಿಯೇ ನಿಂತಿದೆ. ಇತರೆ ಆನೆಗಳು ರಸ್ತೆ ಬದಿಗೆ ಸರಿಯುತ್ತಿದ್ದಂತೆ ಬಸ್ ಚಾಲಕ ಬಸ್ ಅನ್ನು ನಿಧಾನವಾಗಿ ಚಾಲನೆ ಮಾಡಲು ಪ್ರಯತ್ನಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ತಾಯಿ ಆನೆ ಬಸ್‍ನತ್ತ ನುಗ್ಗಿ ಬಂದಿದೆ. ದಾಳಿ ಸೂಕ್ಷ್ಮತೆ ಅರಿತ ಚಾಲಕ ಬಸ್‍ನ್ನು ಹಿಮ್ಮುಖವಾಗಿ ವೇಗವಾಗಿಯೇ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಆದರೂ, ಆ ಆನೆ ತನ್ನ ಕರುಳ ಕುಡಿಯ ರಕ್ಷಣೆಗಾಗಿ ಬಸ್‍ನ್ನು ಹಿಂಬಾಲಿಸಿ ಬಂದಿದೆ. ಈ ನಡುವೆ ಹಿಂಬದಿಯಿಂದ ವಾಹನವೊಂದು ಬರುತ್ತಿರುವುದನ್ನು ಗಮನಿಸಿದ ಚಾಲಕ ಬಸ್ಸನ್ನು ನಿಲ್ಲಿಸಿದ್ದಾರೆ. ಆದರೆ ಕೋಪಗೊಂಡಿದ್ದ ತಾಯಿಯಾನೆ ಬಸ್‍ಗೆ ಗುದ್ದಿ ಮುಂಭಾ ಗದ ಗಾಜನ್ನು ಜಖಂಗೊಳಿಸಿದೆ. ಬಸ್‍ನಲ್ಲಿ ಸುಮಾರು 50 ಪ್ರಯಾಣಿಕರಿದ್ದರು ಎನ್ನಲಾ ಗಿದೆ. ಆನೆ ಬಸ್‍ಗೆ ಸೊಂಡಿಲಿನಿಂದ ಬಡಿದು, ಹಣೆಯಿಂದ ಗುದ್ದಿದ ನಂತರ ಹಿಮ್ಮುಖ ವಾಗಿ ಮರಿಯತ್ತ ಧಾವಿಸಿದೆ. ಈ ನಡುವೆ ಬಸ್‍ನಲ್ಲಿದ್ದ ಪ್ರಯಾಣಿಕರು ಜೋರಾಗಿ ಕಿರುಚಿಕೊಂಡಿದ್ದ ಹಿನ್ನೆಲೆಯಲ್ಲಿ ಆನೆ ಮತ್ತೆ ದಾಳಿ ನಡೆಸದೆ ವಾಪಸ್ಸಾಗಿದೆ. ಸುಮಾರು ಅರ್ಧ ಗಂಟೆಯವರೆಗೂ ವಾಹನಗಳ ಸವಾರರನ್ನು ಕಾಡಿದ ಆನೆಯ ಹಿಂಡಿ ಅಂತಿಮವಾಗಿ ಕಾಡಿನತ್ತ ಹೆಜ್ಜೆ ಹಾಕಿದ ಬಳಿಕ ವಾಹನಗಳ ಮೈಸೂರು ಮತ್ತು ಕೇರಳದತ್ತ ತೆರಳಿದವು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ತಿಳಿಸಿದ್ದಾರೆ.

ವಿಡಿಯೋ ವೈರಲ್: ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಮೇಲೆ ಆನೆ ದಾಳಿ ಮಾಡಲು ಮುಂದಾದ ದೃಶ್ಯವನ್ನು ಅದೇ ಬಸ್‍ನಲ್ಲಿದ್ದ ಪ್ರಯಾಣಿಕ ರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಸುಮಾರು ಎರಡೂವರೆ ನಿಮಿಷದ ಆನೆ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನೆಯ ದಾರಿಯೇ ಅದು…!
ಸುಮಾರು 35 ವರ್ಷದ ತಾಯಿ ಆನೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ದಾಳಿ ನಡೆಸಲು ಮುಂದಾದ ಸ್ಥಳ ಆನೆಗಳು ರಸ್ತೆ ದಾಟುವ ಜಾಗವಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಂತೆ ಆಲೇಗೌಡನಕಟ್ಟೆ ಎಂಬ ಕೆರೆಯಿದೆ. ಈ ಸ್ಥಳದಲ್ಲಿ ಯಾವಾಗಲೂ ಆನೆಗಳಿರು ತ್ತವೆ. ಮರಿಯಾನೆ ಇದ್ದ ಕಾರಣ ಆ ತಾಯಿ ಆನೆ ತನ್ನ ಮರಿಗೆ ಏನಾದರೂ ಅನಾಹುತ ಸಂಭವಿಸಬಹುದು ಎಂದು ಸಹಜವಾಗಿ ಆತಂಕದಿಂದ ದಾಳಿ ನಡೆಸಲು ಯತ್ನಿಸಿದೆ.

ಆನೆಗಳ ಹಿಂಡಿನಲ್ಲಿ ಮರಿಗಳಿದ್ದರೆ ವಾಹನ ಸವಾರರು ಅಂತರ ಕಾಯ್ದುಕೊಂಡು ವಾಹನವನ್ನು ನಿಲ್ಲಿಸಿದರೆ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಕೆಲವರು ಆನೆಗಳ ಹತ್ತಿರವೇ ಹೋಗಿ ವಾಹನ ನಿಲ್ಲಿಸುವುದರಿಂದ ಇಂತಹ ಘಟನೆ ನಡೆಯಲು ಕಾರಣವಾಗಿದೆ. ಆನೆಯ ಹಿಂಡಿನೊಂದಿಗೆ ಮರಿಯಾನೆ ರಸ್ತೆಯನ್ನು ದಾಟುವವರೆಗೂ ಕಾಯದೆ ಬಸ್ ಚಾಲನೆ ಮಾಡಲು ಮುಂದಾಗಿದ್ದೇ ಈ ಘಟನೆಗೆ ಕಾರಣವಾಗಿದೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾದವ್ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »