ಕುಡಿಯುವ ನೀರಿನ ಯೋಜನೆ ಅಪೂರ್ಣ
ಮಂಡ್ಯ

ಕುಡಿಯುವ ನೀರಿನ ಯೋಜನೆ ಅಪೂರ್ಣ

February 6, 2022

ಮಳವಳ್ಳಿ, ಫೆ.5(ಮೋಹನ್‍ರಾಜ್)-ಪುರಸಭೆಯ 24×7 ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಲೋಕಾ ಯುಕ್ತ ಅಥವಾ ಸಿಬಿಐ ತನಿಖೆಗೆ ಒತ್ತಾಯಿಸಿ ಸದಸ್ಯರು ಹೋರಾಟ ನಡೆಸಿದ ಘಟನೆ ಪುರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪಟ್ಟಣದ ಪುರಸಭೆಯ ಸಭಾಂ ಗಣದಲ್ಲಿ ಅಧ್ಯಕ್ಷೆ ರಾಧಾ ನಾಗರಾಜು ಅಧ್ಯಕ್ಷತೆ ಹಾಗೂ ಶಾಸಕ ಡಾ.ಕೆ.ಅನ್ನ ದಾನಿ ಉಪಸ್ಥಿತಿಯಲ್ಲಿ ಸಭೆ ನಡೆಯಿತು.
ಸಭೆಯು ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು 14ನೇ ಹಣಕಾಸಿನ ಯೋಜನೆಯಲ್ಲಿ ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಬರೀ 1.5 ಲಕ್ಷ ಅನುದಾನ ನೀಡಿದ್ದು, ಜೆಡಿಎಸ್ ಸದಸ್ಯರ ವಾರ್ಡ್‍ಗಳಿಗೆ 10 ಲಕ್ಷಕ್ಕೂ ಅಧಿಕ ಅನುದಾನ ನೀಡುವ ಮೂಲಕ ಅಧ್ಯಕ್ಷರು ತಾರತಮ್ಯ ಅನುಸರಿಸಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷರ ವೇದಿಕೆಯ ಮುಂಭಾಗ ಧರಣಿ ನಡೆಸಿದರು.

ಈ ವೇಳೆ ಮಧ್ಯೆಪ್ರವೇಶಿಸಿದ ಶಾಸಕ ಡಾ.ಕೆ.ಅನ್ನದಾನಿ ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರ್ಕಾರ ಅನುದಾನ ನೀಡಿಲ್ಲ. ತಾರತಮ್ಯ ಆಗಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗು ವುದು. ಅಲ್ಲದೆ ಕಳೆದ ಎರಡು ಅವಧಿ ಯಲ್ಲಿ ಆಗಿರುವ ತಾರತಮ್ಯದ ಬಗ್ಗೆಯೂ ಮಾತನಾಡಬೇಕಾಗುತ್ತದೆ. ಧರಣಿ ನಿಲ್ಲಿಸಿ ನಿಮ್ಮ ಕುರ್ಚಿಗಳಿಗೆ ತೆರಳಿ ಎಂದರು.

ಕಾಂಗ್ರೆಸ್ ಸದಸ್ಯರಾದ ರಾಜಶೇಖರ್ ಮತ್ತು ಎಂ.ಎನ್.ಶಿವಸ್ವಾಮಿ ಶಾಸಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ, ನಿಮ್ಮ ಅವಧಿಯಲ್ಲಿ ತಂದಿರುವ ಅನುದಾನಗಳ ವಿವರಗಳನ್ನು ನೀಡಿ ಎಂದರು.

ಆದರೆ ಶಾಸಕರು, ಅಧ್ಯಕ್ಷ-ಉಪಾಧ್ಯಕ್ಷರ ಮಾತಿಗೆ ಕ್ಯಾರೇ ಎನ್ನದ ಬಿಜೆಪಿ ಸದಸ್ಯರು ತಕ್ಷಣವೇ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಿ ಎಂದು ಒತ್ತಾಯಿಸಿ ಧರಣಿ ಮುಂದುವರೆಸಿದರು.

1ನೇ ವಾರ್ಡ್ ಸದಸ್ಯ ಎಂ.ಎನ್.ಕೃಷ್ಣ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಪುರಸಭೆಯ ತಾರತಮ್ಯ ನೀತಿಯಿಂದ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬಿಜೆಪಿ ಸದಸ್ಯರ ವಾರ್ಡ್‍ಗಳಿಗೆ ಸಮರ್ಪಕ ಅನುದಾನ ನೀಡದೇ ಅಧ್ಯಕ್ಷರು ಪಕ್ಷಪಾತ ಮಾಡುತ್ತಿದ್ದಾರೆ. ತಮಗೆ ಬೇಕಾದ ಸದಸ್ಯರ ವಾರ್ಡ್‍ಗಳಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ಶಾಸಕರು ಸಹ ಪಟ್ಟಣದ ಅಭಿವೃದ್ಧಿಗೆ ಅನುದಾನ ತರುವಲ್ಲಿ ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಜಾರಿಯಲ್ಲಿರುವ 72 ಕೋಟಿ ವೆಚ್ಚದ 24×7 ಕುಡಿಯುವ ನೀರಿನ ಯೋಜನೆ ಯಲ್ಲಿ ಸಮರ್ಪಕ ನೀರು ಪೂರೈಕೆಯಾ ಗದೇ ಜನರು ನಮಗೆ ಹಿಡಿಶಾಪವಾಗು ತ್ತಿದ್ದು, ಅಪೂರ್ಣ ಯೋಜನೆ ಹೇಗೆ ಪುರ ಸಭೆಗೆ ಹಸ್ತಾಂತರವಾಯಿತು? ಕೂಡಲೇ ಈ ಬಗ್ಗೆ ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪಕ್ಷೇತರ ಸದಸ್ಯರಾದ ಬಸವರಾಜು, ಪ್ರಮೀಳಾ ಒತ್ತಾಯಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿ ತನಿಖೆಗೆ ಆಗ್ರಹಿಸಿ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಕುಡಿಯುವ ನೀರು ಪೂರೈಕೆ ಯೋಜನೆ ಯಡಿ ಪಟ್ಟಣದ ಪ್ರವಾಸಿ ಮಂದಿರ ಬಳಿ 4.5 ಕೋಟಿ ವೆಚ್ಚದ ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣದ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ. ಅಲ್ಲದೆ ಅಲ್ಲಿ ಟ್ಯಾಂಕ್ ನಿರ್ಮಾಣ ಮಾಡುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದು ಅವೈಜ್ಞಾ ನಿಕ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು.

ಈ ಬಗ್ಗೆ ಮುಖ್ಯಾಧಿಕಾರಿ ಕೆ.ಎಂ.ಪವನ್ ಕುಮಾರ್ ಪ್ರತಿಕ್ರಿಯಿಸಿ, ಟ್ಯಾಂಕ್ ನಿರ್ಮಾ ಣದ ಸಂಬಂಧ ನಮ್ಮ ಜೊತೆ ಜಲಮಂಡ ಳಿಯ ಅಧಿಕಾರಿಗಳು ಯಾವುದೇ ಚರ್ಚೆ ನಡೆಸಿಲ್ಲ. ಉಳಿಕೆಗೆ ಅನುದಾನದಲ್ಲಿ ಕಾಮ ಗಾರಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಟಿ.ನಂದಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ ಇದ್ದರು.

Translate »