ತುರ್ತು ಸ್ಪಂದನಾ ವಾಹನ ಸಂಚಾರಕ್ಕೆ ಚಾಲನೆ
ಕೊಡಗು

ತುರ್ತು ಸ್ಪಂದನಾ ವಾಹನ ಸಂಚಾರಕ್ಕೆ ಚಾಲನೆ

May 5, 2021

ಮಡಿಕೇರಿ, ಮೇ 4- ಪೊಲೀಸ್ ಇಲಾಖೆ ಯಿಂದ ಕೊಡಗು ಜಿಲ್ಲಾ ಪೊಲೀಸ್ ಘಟಕಕ್ಕೆ ನೀಡಲಾಗಿರುವ 7 ‘ತುರ್ತು ಸ್ಪಂದನಾ ವಾಹನ’ ಸಂಚಾರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮಂಗಳವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಸಾರ್ವಜನಿಕರ ಅನುಕೂಲಕ್ಕೆ ತರಲಾಗಿದೆ. ಆ ದಿಸೆಯಲ್ಲಿ ‘ದೇಶಾದ್ಯಂತ ಒಂದೇ ತುರ್ತು ಕರೆ 112’ ಸಂಖ್ಯೆಗೆ ಕರೆ ಮಾಡಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ಪರಿಹರಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.
ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಇಆರ್‍ಎಸ್‍ಎಸ್ 112 ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ತುರ್ತು ಕರೆಗಳಾದ 100(ಪೊಲೀಸ್), 101 (ಅಗ್ನಿಶಾಮಕ ಮತ್ತು ತುರ್ತು ಸೇವೆ) ಹಾಗೂ ಇತರೆ ತುರ್ತು ಕರೆಗಳನ್ನು 112 ರಲ್ಲಿ ಏಕೀಕೃತಗೊಳಿಸುವುದು ಇದರ ಉದ್ದೇಶ ವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಕ್ಷಮಾ ಮಿಶ್ರ ಮಾಹಿತಿ ನೀಡಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವ ಜನಿಕರು ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಅಕ್ರಮ ಜೂಜಾಟ, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ರಕ್ಷಣೆ, ಪ್ರಾಕೃತಿಕ ವಿಪತ್ತು ಮತ್ತಿತರ ಸಂದರ್ಭಗಳಲ್ಲಿ ತುರ್ತು ಸೇವೆಗಳು ಕಂಡುಬಂದಲ್ಲಿ 112ಕ್ಕೆ ಕರೆ ಮಾಡಿ ಸೇವೆ ಪಡೆಯಬಹುದಾಗಿದೆ ಎಂದು ಕ್ಷಮಾ ಮಿಶ್ರ ಅವರು ವಿವರಿಸಿದರು.

ಇನ್ನಷ್ಟು ಮಾಹಿತಿ: ಸ್ಮಾರ್ಟ್ ಮೊಬೈಲ್‍ನಲ್ಲಿ ಪವರ್ ಬಟನ್‍ನ್ನು ಐದು ಬಾರಿ ನಿರಂತರವಾಗಿ ಒತ್ತುವ ಮೂಲಕ ತುರ್ತು ವಿನಂತಿ ಕಳುಹಿಸಬಹುದಾಗಿದೆ. ಹಾಗೆಯೇ ಕರೆ ಮಾಡಿದವರ ಸ್ವಯಂ ಚಾಲಿತ ಸ್ಥಳ ಗುರುತಿಸುವಿಕೆಯೊಂದಿಗೆ ಹತ್ತಿರದ ತುರ್ತು ಸ್ಪಂದನ ವಾಹನದ ಸಿಬ್ಬಂದಿಗಳಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

ರಾಜ್ಯಾದ್ಯಂತ ತುರ್ತು ಕರೆ ಸ್ವೀಕರಿಸಲು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವೈರ್‍ಲೆಸ್ ಸ್ಥಾಪಿಸಲಾಗಿದೆ. ಸ್ವೀಕೃತಗೊಂಡ ಕರೆಗಳ್ನು ಸಂಬಂಧಿಸಿದ ಜಿಲ್ಲೆಗಳ ಸಂಯೋ ಜನಾ ಕೇಂದ್ರಕ್ಕೆ ರವಾನಿಸಿ ಹತ್ತಿರದ ತುರ್ತು ಸ್ಪಂದನ ವಾಹನಕ್ಕೆ ಮಾಹಿತಿ ನೀಡಿ ದೂರುದಾರರ ದೂರಿಗೆ ಸ್ಪಂದಿಸಲಿದ್ದಾರೆ.
ಈ ವೇಳೆ ಡಿವೈಎಸ್‍ಪಿ ದಿನೇಶ್ ಕುಮಾರ್, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಇನ್ಸ್‍ಪೆಕ್ಟರ್ ಮೇದಪ್ಪ, ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್ ರಾಚಯ್ಯ, ನಗರ ವೃತ್ತ ಪೊಲೀಸ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ, ಗ್ರಾಮೀಣ ಪೊಲೀಸ್ ಇನ್ಸ್‍ಪೆಕ್ಟರ್ ರವಿಕಿರಣ, ನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅಂತಿಮ, ಪೊಲೀಸ್ ನಿಯಂತ್ರಣ ಕೊಠಡಿಯ ಪಿಎಸ್‍ಐ ಧನಂಜಯ ಇತರರು ಇದ್ದರು.

Translate »