ಡ್ರಗ್ಸ್ ದಂಧೆ ಕೂಡ ಭಯೋತ್ಪಾದನೆಯ ಒಂದು ಭಾಗ: ಸಂಸದ ಪ್ರತಾಪ್ ಸಿಂಹ
ಮೈಸೂರು

ಡ್ರಗ್ಸ್ ದಂಧೆ ಕೂಡ ಭಯೋತ್ಪಾದನೆಯ ಒಂದು ಭಾಗ: ಸಂಸದ ಪ್ರತಾಪ್ ಸಿಂಹ

September 3, 2020

ಮೈಸೂರು, ಸೆ.2(ಆರ್‍ಕೆಬಿ)- ಡ್ರಗ್ಸ್(ಮಾದಕ ದ್ರವ್ಯ) ದಂಧೆ ಭಯೋತ್ಪಾದನೆಯ ಒಂದು ಭಾಗ. ಈ ದಂಧೆಯನ್ನು ನಿರ್ನಾಮ ಮಾಡದಿದ್ದರೆ ದೇಶಕ್ಕೆ ಅಪಾಯ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.

ಒಂದು ದೇಶವನ್ನು ಹಾಳು ಮಾಡಲು ಬಾಂಬ್ ಹಾಕಬೇಕೆಂದೇನಿಲ್ಲ, ಕ್ಷಿಪಣಿ ಹಾರಿಸುವಂತೇನಿಲ್ಲ. ಆ ದೇಶದ ಯುವಕರನ್ನು ಮಾದಕ ವ್ಯಸನಿಗಳಾಗಿ ಮಾಡಿ ದರೆ ಅವರ ಕುಟುಂಬ, ತಲೆಮಾರು ನಾಶವಾಗುತ್ತದೆ. ಅಂತಹ ಕೆಟ್ಟ ಬೆಳವಣಿಗೆ ಇದು. ವಿವಿಧ ವಿರೋಧಿ ರಾಷ್ಟ್ರಗಳ ಮೂಲಕ ಭಾರತಕ್ಕೆ ಡ್ರಗ್ಸ್ ತಂದು ಹಂಚಲಾಗುತ್ತಿದೆ ಎಂದರು.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಬುಧವಾರ ಮಾತ ನಾಡಿದ ಅವರು, ಈ ದಂಧೆಯೊಳಗೆ ಸ್ಯಾಂಡಲ್‍ವುಡ್ ಅಥವಾ ಯಾರೇ ಭಾಗಿಯಾಗಿರಲಿ, ಘಟನೆಯನ್ನು ಎಚ್ಚರಿಕೆಯ ಪಾಠವಾಗಿ ಪರಿಗಣಿಸಿ, ಡ್ರಗ್ಸ್ ವಿರುದ್ಧ ಹೋರಾಟ ಪ್ರಾರಂಭಿಸ ಬೇಕಿದೆ. ಈ ದಂಧೆಯನ್ನು ಪೂರ್ಣ ನಿರ್ಮೂಲನೆ ಮಾಡಬೇಕಿದೆ. ಈ ಸಂಬಂಧ ರಾಜ್ಯದ ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳಲ್ಲಿ ಮನವಿ: ದೇಶದ ಉಳಿವಿನ ದೃಷ್ಟಿ ಯಿಂದ ಕಾಲೇಜು ವಿದ್ಯಾರ್ಥಿಗಳು ಈ ಡ್ರಗ್ಸ್ ವಹಿವಾಟಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ದ್ರವ್ಯ ಎಲ್ಲಿಂದ ಬರುತ್ತಿದೆ? ಎಲ್ಲೆಲ್ಲಿ ಸಿಗುತ್ತದೆ? ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬ ವಿಚಾರಗಳನ್ನು ಪೊಲೀಸರಿಗೆ ತಿಳಿಸಬೇಕು. ಡ್ರಗ್ಸ್ ದಂಧೆ ಮೇಲೆ ಪೊಲೀಸ್ ದಾಳಿ ನಡೆಸಿ ನಿರ್ನಾಮ ಮಾಡಬೇಕು. ಅದಕ್ಕೆ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

Translate »