ಬೆಂಗಳೂರಲ್ಲಿ ಡ್ರಗ್ಸ್ ದಂಧೆ: ಮೈಸೂರಲ್ಲಿ ಪೊಲೀಸರು ಅಲರ್ಟ್
ಮೈಸೂರು

ಬೆಂಗಳೂರಲ್ಲಿ ಡ್ರಗ್ಸ್ ದಂಧೆ: ಮೈಸೂರಲ್ಲಿ ಪೊಲೀಸರು ಅಲರ್ಟ್

September 7, 2020

ಮೈಸೂರು,ಸೆ.6(ವೈಡಿಎಸ್)-ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಪತ್ತೆ ಯಾದ ಬೆನ್ನಲ್ಲೇ ಮೈಸೂರಲ್ಲೂ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳ ಮಾರಾಟ, ಸಂಗ್ರಹದ ವಿರುದ್ಧ ನಗರ ಪೊಲೀಸರು ವಿಶೇಷ ಕಾರ್ಯಾ ಚರಣೆ ಆರಂಭಿಸಿದ್ದಾರೆ. ಭಾನುವಾರ ನಗರದ ವಿವಿಧ ಸ್ಥಳಗಳು ಮತ್ತು ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿ ದ್ದಾರೆ. 90 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನೊಳಗೊಂಡ ನಗರ ಪೊಲೀಸರ ವಿಶೇಷ ತಂಡ, ಭಾನುವಾರ ಬೆಳಗ್ಗೆ ನರಸಿಂಹರಾಜ, ಮಂಡಿ, ಉದಯಗಿರಿ ಹಾಗೂ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳು
ಮಾರಾಟವಾಗುವ, ಅನುಮಾನವಿರುವ ಸ್ಥಳಗಳು ಹಾಗೂ ಈ ಹಿಂದೆ ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ಮಾಡಿ ದಸ್ತಗಿರಿಯಾಗಿರುವ ವೃತ್ತಿಪರ ಆರೋಪಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಈ ವೇಳೆ ಯಾವುದೇ ರೀತಿಯ ಗಾಂಜಾ, ಮಾದಕ ವಸ್ತುಗಳು ದೊರೆತಿಲ್ಲ. ಆದರೆ, ಬೆಂಗಳೂರಿನಲ್ಲಿ ಗಾಂಜಾ, ಮಾದಕ ವಸ್ತುಗಳ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಕೆಲ ವೃತ್ತಿಪರ ಆರೋಪಿಗಳು ತಮ್ಮ ಮನೆಗಳಿಗೆ ಬೀಗ ಹಾಕಿ, ಮನೆಖಾಲಿ ಮಾಡಿದ್ದರು.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಸೂಚನೆ ಮೇರೆಗೆ, ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮರಿಯಪ್ಪ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಜಿ.ಶೇಖರ್(ಎನ್.ಆರ್.ಠಾಣೆ), ನಾರಾಯಣಸ್ವಾಮಿ(ಮಂಡಿ), ಎ.ಮಲ್ಲೇಶ್(ಮೇಟಗಳ್ಳಿ), ಎಲ್.ಅರುಣ್(ವಿ.ವಿ.ಪುರಂ), ಹೆಚ್.ಆರ್.ವಿವೇಕಾನಂದ(ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಠಾಣೆ), ವಿವೇಕಾನಂದ, ಜಗದೀಶ್(ಸಿಸಿಬಿ ಘಟಕ) ಅವರನ್ನೊಳಗೊಂಡ ವಿಶೇಷ ತಂಡ ದಾಳಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮಾಹಿತಿ ನೀಡಿ: ಮೈಸೂರು ನಗರದಲ್ಲಿ ಗಾಂಜಾ ಮತ್ತು ಇತರೇ ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣೆ ನಿಷೇದ ಸಂಬಂಧ ಇದೇ ರೀತಿಯಾಗಿ ವಿಶೇಷ ಕಾರ್ಯಾಚರಣೆಗಳು ಮುಂದುವರೆಯಲಿವೆ. ಗಾಂಜಾ, ಮಾದಕ ವಸ್ತುಗಳ ಮಾರಾಟ, ಸಂಗ್ರಹ ಮತ್ತು ಸಾಗಾಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ದೂ.ಸಂ. 100, 2418339ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಪೊಲೀಸರೊಂದಿಗೆ ಕೈಜೋಡಿಸಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

 

Translate »