ದಸರಾ ಸಾಂಪ್ರದಾಯಿಕ ವಿಧಿ ವಿಧಾನ ಪ್ರಕ್ರಿಯೆಗೆ ಚಾಲನೆ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ  ಸಚಿವ ಸೋಮಶೇಖರ್‍ರಿಂದ ಪೂಜೆ
ಮೈಸೂರು

ದಸರಾ ಸಾಂಪ್ರದಾಯಿಕ ವಿಧಿ ವಿಧಾನ ಪ್ರಕ್ರಿಯೆಗೆ ಚಾಲನೆ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ ಸಚಿವ ಸೋಮಶೇಖರ್‍ರಿಂದ ಪೂಜೆ

August 30, 2022

ಮೈಸೂರು,ಆ.29(ಎಂಟಿವೈ)- ದಸರಾ ಮಹೋ ತ್ಸವದ ಜಂಬೂಸವಾರಿ ದಿನ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಕುಶಾಲತೋಪು ಸಿಡಿಸಲು ಬಳಸುವ ಫಿರಂಗಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.
ಮೈಸೂರು ಅರಮನೆಯ ಆನೆ ಬಾಗಿಲಿನ ಬಳಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಮಧ್ಯಾಹ್ನ ಅರ್ಚಕ ಎಸ್.ವಿ.ಪ್ರಹ್ಲಾದರಾವ್, ವಿಧಿ ವಿಧಾನದಂತೆ ಗಣಪತಿ, ವಿಜಯ ಗಣಪತಿ ಜೊತೆಗೆ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಬಳಿಕ ಸಚಿವ
ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಹ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದರು.

ಜಂಬೂಸವಾರಿ ದಿನ ಅರಮನೆ ಆವರಣದಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡ ದೇವಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ವೇಳೆ ಪೊಲೀಸ್ ಬ್ಯಾಂಡ್ ತಂಡ ಮೂರು ಹಂತದಲ್ಲಿ ರಾಷ್ಟ್ರಗೀತೆ ನುಡಿಸುವ ವೇಳೆ 7 ಫಿರಂಗಿಗಳಿಂದ ತಲಾ ಮೂರು ಸುತ್ತಿನಂತೆ 21 ಬಾರಿ ಕುಶಾಲತೋಪು(ಸಿಡಿಮದ್ದು) ಸಿಡಿಸಲಾಗುತ್ತದೆ. ಇದರ ತಾಲೀಮಿಗೆ ಇಂದು ಚಾಲನೆ ನೀಡಲಾಯಿತು.
ಕುಶಾಲತೋಪು ಸಿಡಿಸುವ 7 ಫಿರಂಗಿ ಸೇರಿದಂತೆ ಅರಮನೆ ಆವರಣದ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿದ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಈಡುಗಾಯಿ ಹೊಡೆದರೆ, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಬೂದು ಕುಂಬಳಕಾಯಿ ಒಡೆದರು. ಬಳಿಕ ಸಚಿವರು ಫಿರಂಗಿ ಗಾಡಿಯನ್ನು ಮುಂದೆ ತಳ್ಳಿ ನಿಂಬೆಹಣ್ಣಿನ ಮೇಲೆ ಹರಿಸಿದ ನಂತರ ಮುಂದಿನ ಪ್ರಕ್ರಿಯೆಗೆ ಸಿಬ್ಬಂದಿಗೆ ಅನುವು ಮಾಡಿಕೊಡಲಾಯಿತು.

ಬುಧವಾರದಿಂದ ಒಣ ತಾಲೀಮು: ಇಂದು ಫಿರಂಗಿಯಲ್ಲಿನ ಕೋವಿ, ಮದ್ದು ತುಂಬುವ ರಂಧ್ರ ಸ್ವಚ್ಛಗೊಳಿಸಲಾಗುತ್ತದೆ. ಬುಧವಾರದಿಂದ ಅರಮನೆ ಆವರಣದಲ್ಲಿ ಒಣ ತಾಲೀಮು ಆರಂಭಿಸಲಾಗುತ್ತದೆ. ಒಂದೊಂದು ಪಿರಂಗಿಗೂ 4-5 ಸಿಬ್ಬಂದಿ ನಿಯೋಜಿಸಲಾ ಗುತ್ತದೆ. ಜಂಬೂಸವಾರಿ ಆರಂಭಕ್ಕೆ 10ದಿನ ಮುನ್ನ ಮೂರು ಬಾರಿ ದಸರಾ ಗಜಪಡೆ ಹಾಗೂ ಅಶ್ವರೋಹಿ ದಳದ ಸಮ್ಮುಖದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ.

ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗಿದೆ: ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಸಂಪ್ರ ದಾಯದಂತೆ ಪೂಜೆ ಸಲ್ಲಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಡಾಚಂದ್ರಗುಪ್ತ ನೇತೃತ್ವದಲ್ಲಿ ಫಿರಂಗಿ ದಳ ಕುಶಾಲತೋಪು ಸಿಡಿಸುವ ಕಾರ್ಯ ನಡೆಸಲಿದೆ. ವಿಜಯ ದಶಮಿ ದಿನದಂದು 21 ಬಾರಿ ಸಿಡಿಮದ್ದು ಸಿಡಿಸುವ ಜವಾಬ್ದಾರಿ ಫಿರಂಗಿ ದಳದ್ದಾಗಿದೆ. ಅದಕ್ಕಾಗಿ ಸುರಕ್ಷಿತ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುತ್ತದೆ. ಆನೆಗಳಿಗೆ ದೊಡ್ಡ ಪ್ರಮಾಣದ ಶಬ್ದವನ್ನು ಪರಿಚಯಿಸಬೇಕಿದೆ. ಜಂಬೂಸವಾರಿ ಹಾಗೂ ಪಂಜಿನ ಕವಾಯತಿನಲ್ಲೂ ಇದೇ ಫಿರಂಗಿ ಬಳಸಿ ಕುಶಾಲತೋಪು ಸಿಡಿಸಲಾಗುತ್ತದೆ. ಅದಕ್ಕೆ ನುರಿತ ಸಿಬ್ಬಂದಿಗಳನ್ನೇ ನಿಯೋಜಿಸಲಾಗುವುದು ಎಂದರು. ಅರ್ಚಕ ಎಸ್.ವಿ.ಪ್ರಹ್ಲಾದರಾವ್ ಮಾತನಾಡಿ, ಈ ಹಿಂದೆ ಯುದ್ಧಕ್ಕೆ ಹೋಗುವಾಗ ಹಾಗೂ ವಾಪಸ್ಸಾದ ವೇಳೆ ಫಿರಂಗಿಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ವಿತ್ತು. ವಿಜಯದ ಸಂಕೇತವಾಗಿ 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಆ ಪ್ರಕ್ರಿಯೆ ನಿರ್ವಿಘ್ನವಾಗಿ ನೆರವೇರಲೆಂದು ವಿಜಯಗಣಪತಿಯನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯP್ಷÀ ಎಂ.ಶಿವಕುಮಾರ್, ಡಿಸಿಎಫ್ ಡಾ.ವಿ.ಕರಿಕಾಳನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಆರ್‍ಎಫ್‍ಓ ಸಂತೋಷ್ ಹೂಗಾರ್ ಇನ್ನಿತರರು ಉಪಸ್ಥಿತರಿದ್ದರು.

Translate »